ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಬಿಜೆಪಿಗೆ ಎಂಇಐಎಲ್‌ ದೇಣಿಗೆ ₹584 ಕೋಟಿ

Published 23 ಮಾರ್ಚ್ 2024, 0:34 IST
Last Updated 23 ಮಾರ್ಚ್ 2024, 0:34 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ಅತಿಹೆಚ್ಚು ದೇಣಿಗೆ ನೀಡಿದ ಎರಡನೇ ಕಂಪನಿಯಾದ ಮೇಘ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (ಎಂಇಐಎಲ್‌) ಬಿಜೆಪಿ ಒಂದಕ್ಕೇ ₹519 ಕೋಟಿ ದೇಣಿಗೆ ನೀಡಿದೆ ಎಂದು ವರದಿಯಾಗಿದೆ. ಆದರೆ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿದರೆ, ಈ ಮೊತ್ತವು ಇನ್ನೂ ಹೆಚ್ಚಾಗುತ್ತದೆ. ಎಂಇಐಎಲ್‌ ಕಂಪನಿಯು ಬಿಜೆಪಿಗೆ ₹584 ಕೋಟಿ ದೇಣಿಗೆ ನೀಡಿದೆ.

ಮೇಘ ಎಂಜಿನಿಯರಿಂಗ್‌ ಕಂಪನಿಯು ನೇರವಾಗಿ ಬಿಜೆಪಿಗೆ ₹584 ಕೋಟಿ ದೇಣಿಗೆ ನೀಡಿದ್ದರೂ, ದಾಖಲೆಗಳಲ್ಲಿ ಕಂಪನಿಯ ಹೆಸರು ಬದಲಾವಣೆ ಮಾಡಿರುವ ಕಾರಣಕ್ಕೆ ದೇಣಿಗೆಯ ಪೂರ್ಣ ಲೆಕ್ಕ ಸಿಗುವುದಿಲ್ಲ.

‘ಮೇಘ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಲಿ ಮಿಟೆಡ್‌ (LI MITED)’ ಹೆಸರಿನಲ್ಲಿ ಕಂಪನಿಯು ಒಟ್ಟು ₹519 ಕೋಟಿ ದೇಣಿಗೆಯನ್ನು ನೀಡಿದೆ. ಅಲ್ಲದೆ ‘ಮೇಘ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಎಲ್‌ಟಿಡಿ (LTD)’ ಹೆಸರಿನಲ್ಲಿ ₹60 ಕೋಟಿ ದೇಣಿಗೆಯನ್ನು ಬಿಜೆಪಿಗೆ ನೀಡಿದೆ. ಇದೂ ಅಲ್ಲದೆ, ‘ಮೇಘ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (LIMITED)’ ಹೆಸರಿನಲ್ಲೂ ₹5 ಕೋಟಿ ದೇಣಿಗೆ ನೀಡಿದೆ. ಕಂಪನಿ ಉದ್ದೇಶಪೂರ್ವಕವಾಗಿಯೇ ಹೆಸರುಗಳನ್ನು ತಿರುಚಿ ದೇಣಿಗೆ ನೀಡಿದೆಯೇ ಅಥವಾ ಎಸ್‌ಬಿಐ ಮಾಹಿತಿಯನ್ನು ಸಂಗ್ರಹಿಸುವಾಗ ತಪ್ಪಾಗಿ ನಮೂದಿಸಿಕೊಂಡಿದೆಯೇ ಎಂಬುದು ಇನ್ನಷ್ಟೇ ಪತ್ತೆಯಾಗಿದೆ.

ಇದಿಷ್ಟು ಅಲ್ಲದೆ ಎಂಇಐಎಲ್‌ನ ಅಧೀನ ಸಂಸ್ಥೆಗಳಾದ ಡಬ್ಲ್ಯುಯುಪಿಟಿಸಿಎಲ್‌ ಕಂಪನಿಯು ಬಿಜೆಪಿಗೆ ₹80 ಕೋಟಿ ದೇಣಿಗೆ ನೀಡಿದೆ. ಎಸ್‌ಇಪಿಸಿ ಪವರ್ ಲಿಮಿಟೆಡ್‌ ₹5 ಕೋಟಿ ದೇಣಿಗೆ ನೀಡಿದೆ. ಇವೆಲ್ಲವನ್ನೂ ಲೆಕ್ಕಹಾಕಿದರೆ, ಕಂಪನಿಯು ನೇರವಾಗಿ ಮತ್ತು ತನ್ನ ಅಧೀನ ಸಂಸ್ಥೆಗಳ ಮೂಲಕ ಬಿಜೆಪಿಗೆ ₹669 ಕೋಟಿ ದೇಣಿಗೆ ನೀಡಿದಂತಾಗುತ್ತದೆ. ಈ ಮೊತ್ತವು, ಚುನಾವಣಾ ಬಾಂಡ್‌ ಮೂಲಕ ಯಾವುದೇ ಒಂದು ಕಂಪನಿಯು ಒಂದೇ ರಾಜಕೀಯ ಪಕ್ಷಕ್ಕೆ ನೀಡಿದ ಅತಿಹೆಚ್ಚಿನ ಮೊತ್ತದ ದೇಣಿಗೆಯಾಗಿದೆ.

₹1.87 ಲಕ್ಷ ಕೋಟಿಗೂ ಹೆಚ್ಚು ಗುತ್ತಿಗೆ: 

ಎಂಇಐಎಲ್‌ ಮತ್ತು ಅದರ ಅಧೀನ ಸಂಸ್ಥೆಗಳು ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ಒಟ್ಟು ₹1,226 ಕೋಟಿ ಮೊತ್ತದ ದೇಣಿಗೆ ನೀಡಿವೆ. ಈ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತು ಹಲವು ರಾಜ್ಯ ಸರ್ಕಾರಗಳಿಂದ ಒಟ್ಟು ₹1.87 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT