ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತ ಗೋಯಲ್ ರಾಜೀನಾಮೆ | ಮೋದಿ ಸರ್ಕಾರ ಉತ್ತರಿಸಲೇಬೇಕು: ಕಾಂಗ್ರೆಸ್

Published 10 ಮಾರ್ಚ್ 2024, 3:20 IST
Last Updated 10 ಮಾರ್ಚ್ 2024, 3:20 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌ ಪಕ್ಷ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಎಕ್ಸ್‌/ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಇದೇನು ಚುನಾವಣಾ ಆಯೋಗವೇ ಅಥವಾ ಚುನಾವಣಾ ಲೋಪವೇ? ಎಂದು ಕೇಳಿದ್ದಾರೆ.

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚುನಾವಣಾ ಆಯೋಗದ ಸಮಿತಿಯಲ್ಲಿ ಕೇವಲ ಒಬ್ಬರು ಸದಸ್ಯರಷ್ಟೇ ಇದ್ದಾರೆ. ಏಕೆ?' ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, 'ನಾನು ಈ ಹಿಂದೆಯೇ ಹೇಳಿದಂತೆ, ಸ್ವತಂತ್ರ ಸಂಸ್ಥೆಗಳ ವ್ಯವಸ್ಥಿತ ನಾಶವನ್ನು ನಿಲ್ಲಿಸದಿದ್ದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರಂಕುಶ ಪ್ರಭುತ್ವವು ಅತಿಕ್ರಮಿಸಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕುಸಿಯುತ್ತಿರುವ ಸಾಂವಿಧಾನಿಕ ಸಂಸ್ಥೆಗಳ ಪಟ್ಟಿಗೆ ಇದೀಗ ಚುನಾವಣಾ ಆಯೋಗವೂ ಸೇರ್ಪಡೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಆಯೋಗದ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕು. ಆದರೆ, ಗೋಯಲ್‌ ಅವರು ತಮ್ಮ ಸ್ಥಾನ ತೊರೆದಿರುವುದರಿಂದ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮಾತ್ರವೇ ಉಳಿದಿದ್ದಾರೆ. ಸಮಿತಿಯಲ್ಲಿದ್ದ ಮತ್ತೊಬ್ಬ ಚುನಾವಣಾ ಆಯುಕ್ತರಾಗಿ ಅನೂಪ್ ಚೌಧರಿ ಪಾಂಡೆ ಅವರು ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದರು.

'ಚುನಾವಣಾ ಆಯುಕ್ತರ ನೇಮಕದ ಹೊಸ ಪ್ರಕ್ರಿಯೆ ಆರಂಭವಾದಾಗಿನಿಂದ ಆಡಳಿತ ಪಕ್ಷ ಮತ್ತು ಪ್ರಧಾನಿಗೆ ಪರಿಣಾಮಕಾರಿಯಾದ ಅಧಿಕಾರ ದೊರೆತಿದೆ. ಆದಾಗ್ಯೂ, ಹಿಂದಿನ ಚುನಾವಣಾ ಆಯುಕ್ತರ ಅವಧಿ ಮುಗಿದ 23 ದಿನಗಳ ನಂತರವೂ ಹೊಸಬರನ್ನು ನೇಮಿಸಿಲ್ಲವೇಕೆ? ಮೋದಿ ಸರ್ಕಾರ ಇದಕ್ಕೆ ಉತ್ತರಿಸಲೇಬೇಕು. ಸೂಕ್ತ ವಿವರಣೆಯನ್ನೂ ನೀಡಬೇಕು' ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಚುನಾವಣಾ ಆಯುಕ್ತ ಅರುಣ್‌ ಗೋಯಲ್‌ ಅವರು ರಾಜೀನಾಮೆ ನೀಡಿರುವುದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಖಂಡಿತವಾಗಿಯೂ ಪಾರದರ್ಶಕತೆ ಇಲ್ಲ. ಸರ್ಕಾರ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಆದರೆ, ಆಗಿನ ಚುನಾವಣಾ ಆಯುಕ್ತ ಅಶೋಕ್‌ ಲಾವಸಾ ಅವರು ಆಯೋಗದ ಕ್ರಮವನ್ನು ವಿರೋಧಿಸಿದ್ದರು. ಅದಾದ ನಂತರ ಲಾವಸಾ ವಿರುದ್ಧ ನಿರಂತರವಾಗಿ ತನಿಖೆಗಳನ್ನು ನಡೆಸಲಾಯಿತು ಎಂದು ವೇಣುಗೋಪಾಲ್‌ ಸ್ಮರಿಸಿದ್ದಾರೆ.

'ಸರ್ಕಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಪಡಿಸುತ್ತಿರುವುದು ಈ ರೀತಿಯ ಧೋರಣೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಉತ್ತರ ಸಿಗಬೇಕು. ಚುನಾವಣಾ ಆಯೋಗವು ಯಾವಾಗಲೂ ಪಕ್ಷಾತೀತವಾಗಿರಬೇಕು' ಎಂದು ಪ್ರತಿಪಾದಿಸಿದ್ದಾರೆ.

ಗೋಯಲ್‌ ಅವರ ಅಧಿಕಾರ ಅವಧಿಯು 2027ರ ಡಿಸೆಂಬರ್‌ 5ರ ವರೆಗೆ ಇತ್ತು. ಮುಂದಿನ ವರ್ಷದ ಫೆಬ್ರುವರಿಯಲ್ಲಿ ಸಿಇಸಿ ರಾಜೀವ್‌ ಕುಮಾರ್‌ ಅವರು ನಿವೃತ್ತಿ ಹೊಂದಲಿದ್ದಾರೆ. ಅದಾದ ಬಳಿಕ, ಗೋಯಲ್‌ ಅವರೇ ಆ ಸ್ಥಾನಕ್ಕೆ ನೇಮಕಗೊಳ್ಳುತ್ತಿದ್ದರು.

ಗೋಯಲ್‌ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯ ಶನಿವಾರ ಪ್ರಕಟಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಗೋಯಲ್‌ ರಾಜೀನಾಮೆ ಹಿಂದಿನ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

1985ನೇ ಬ್ಯಾಚ್‌ನ, ಪಂಜಾಬ್‌ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಅವರು, 2022ರ ನವೆಂಬರ್‌ನಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT