ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಹೊರಬಂದ ಆರೋಪಿಗಳಾದ ವೆರ್ನನ್, ಫೆರೀರಾ

ಎಲ್ಗಾರ್ ಪರಿಷತ್‌ –ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣ
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ಎಲ್ಗಾರ್ ಪರಿಷತ್‌ –ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣದಲ್ಲಿ ಆರೋಪಿಗಳಾಗಿರುವ, ಹೋರಾಟಗಾರರಾದ ವೆರ್ನನ್ ಗೊನ್ಸಾಲ್ವೇಸ್ ಮತ್ತು ಅರುಣ್‌ ಫೆರೀರಾ ಇಲ್ಲಿನ ನವಿಮುಂಬೈನಲ್ಲಿರುವ ಜೈಲಿನಿಂದ ಶನಿವಾರ ಹೊರ ಬಂದರು.

ಈ ಇಬ್ಬರಿಗೆ ಸುಪ್ರೀಂಕೋರ್ಟ್‌ ಜುಲೈ 28ರಂದು ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಅವರ ಬಿಡುಗಡೆಗೆ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿತ್ತು.

ತಲೋಜಾ ಜೈಲಿನಿಂದ ಹೊರಬರುತ್ತಿದ್ದಂತೆ, ಈ ಇಬ್ಬರು ಹೋರಾಟಗಾರರ ಬೆಂಬಲಿಗರು, ಸಂಬಂಧಿಗಳು ಅವರನ್ನು ಸ್ವಾಗತಿಸಿದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇವರ ಬಿಡುಗಡೆಯೊಂದಿಗೆ, ಈ ಪ್ರಕರಣದಲ್ಲಿ ಬಂಧಿತರಾಗಿರುವ 16 ಮಂದಿ ಪೈಕಿ ಐವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಂತಾಗಿದೆ.

ಆರೋಪಿಗಳಲ್ಲೊಬ್ಬರಾದ ಸ್ಟ್ಯಾನ್‌ ಸ್ವಾಮಿ ಅವರು 2021ರ ಜುಲೈನಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಪ್ರಕರಣ 2017ರ ಡಿ.31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್‌ ಪರಿಷತ್‌ ಸಭೆಗೆ ಸಂಬಂಧಿಸಿದ್ದಾಗಿದೆ. ‘ಸಭೆಗೆ ಮಾವೋವಾದಿಗಳು ಆರ್ಥಿಕ ನೆರವು ನೀಡಿದ್ದರು. ಅಲ್ಲಿನ ಪ್ರಚೋದನಕಾರಿ ಭಾಷಣದಿಂದಾಗಿ ಭೀಮಾ– ಕೋರೆ ಗಾಂವ್‌ ಯುದ್ಧ ಸ್ಮಾರಕದ ಬಳಿ ಮಾರನೆ ದಿನ ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು’ ಎಂದು ಪೊಲೀಸರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT