ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಂಪರೆ, ಅಭಿವೃದ್ಧಿ ನಡುವೆ ಶತ್ರುತ್ವ ಸೃಷ್ಟಿಸಿದ ಕಾಂಗ್ರೆಸ್: ಪ್ರಧಾನಿ ಮೋದಿ

Published 22 ಫೆಬ್ರುವರಿ 2024, 14:08 IST
Last Updated 22 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ಮೆಹ್ಸಾಣಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರವೂ ಕಾಂಗ್ರೆಸ್ ನಕಾರಾತ್ಮಕತೆಯಲ್ಲಿ ಬದುಕುವುದನ್ನು ಮುಂದುವರಿಸುತ್ತಿದ್ದು, ದ್ವೇಷದ ದಾರಿಯನ್ನು ಬಿಡಲು ಸಿದ್ಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷವನ್ನು ಗುರುವಾರ ಟೀಕಿಸಿದರು. 

ಗುಜರಾತ್‌ನ ಮೆಹ್ಸಾಣಾ ಜಿಲ್ಲೆಯಲ್ಲಿ ವಾಲಿನಾಥ ಮಹಾದೇವ ದೇವಸ್ಥಾನವನ್ನು ಉದ್ಘಾಟಿಸಿದ ನಂತರ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ₹8,350 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

‘ಸ್ವತಂತ್ರ ಭಾರತದಲ್ಲಿ ದೀರ್ಘಕಾಲದಿಂದಲೂ ಕಾಂಗ್ರೆಸ್ ಪಕ್ಷವು ಪರಂಪರೆ ಮತ್ತು ಅಭಿವೃದ್ಧಿಯ ನಡುವೆ ಬಿಕ್ಕಟ್ಟು ಹಾಗೂ ಶತ್ರುತ್ವವನ್ನು ಸೃಷ್ಟಿಸಿದೆ’ ಎಂದು ಅವರು ಹೇಳಿದರು.

‘ದೇಶವನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ಇದಕ್ಕೆಲ್ಲ ಕಾರಣ. ಸೋಮನಾಥ ದೇವಾಲಯವನ್ನೂ ವಿವಾದದ ಕೇಂದ್ರವಾಗಿ ಮಾಡಿದವರು ಇವರು’ ಎಂದು ಮೋದಿ ವಾಗ್ದಾಳಿ ನಡೆಸಿದರು.

‘ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪಾವಾಗಢ ದೇವಸ್ಥಾನದಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸುವ ಬಯಕೆಯೇ ಕಾಂಗ್ರೆಸ್‌ಗೆ ಇರಲಿಲ್ಲ ಮತ್ತು ಮೊಧೇರಾದ ಸೂರ್ಯ ದೇವಾಲಯವನ್ನು ಓಟ್ ಬ್ಯಾಂಕ್ ರಾಜಕಾರಣದ ಭಾಗವಾಗಿಸಿಕೊಂಡಿತ್ತು’ ಎಂದು ಮೋದಿ ಟೀಕಿಸಿದರು. 

‘ಗುಜರಾತ್ ಹಾಲು ಒಕ್ಕೂಟ ನಂ.1 ಆಗಲಿ’

ಅಹಮದಾಬಾದ್/ನವದೆಹಲಿ: ಅಮುಲ್ ಬ್ರ್ಯಾಂಡ್‌ನ ಮಾಲೀಕತ್ವ ಹೊಂದಿರುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವನ್ನು (ಜಿಸಿಎಂಎಂಎಫ್‌) ಜಾಗತಿಕವಾಗಿ ಈಗಿರುವ ಎಂಟನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ತರುವಂತೆ ಪ್ರಧಾನಿ ಮೋದಿ ರೈತರಿಗೆ ಮತ್ತು ಒಕ್ಕೂಟದ ಇತರ ಭಾಗೀದಾರರಿಗೆ ಸಲಹೆ ನೀಡಿದರು.   ಅಹಮದಾಬಾದ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜಿಸಿಎಂಎಂಎಫ್‌ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು ಒಂದು ಲಕ್ಷ ಹೈನುಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಜಾಗತಿಕ ಡೇರಿ ಉದ್ಯಮ ವಾರ್ಷಿಕ ಶೇ 6ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದರೆ ಭಾರತದ ಡೇರಿ ಉದ್ಯಮವು ಶೇ 2ರ ದರದಲ್ಲಿ ಅಭಿವೃದ್ಧಿ ಹೊಂದುತ್ತಿದೆ’ ಎಂದು ಅವರು ತಿಳಿಸಿದರು. ಇದೇ ವೇಳೆ ರೈತರ ಹಿತ ಕಾಯಲು ತಮ್ಮ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅದರ ಭಾಗವಾಗಿಯೇ ಕಬ್ಬಿನ ‘ಚಾರಿತ್ರಿಕ’ ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು ‘ಎಕ್ಸ್‌’ ವೇದಿಕೆಯಲ್ಲಿ ಸರಣಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT