ನವದೆಹಲಿ: ಅಬಕಾರಿ ಹಗರಣದಲ್ಲಿ ಗಳಿಸಿದ ಹಣವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಇಚ್ಛೆಯನುಸಾರ 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಪ್ರತಿ ಅಭ್ಯರ್ಥಿಗೆ ₹90 ಲಕ್ಷದಂತೆ ಖರ್ಚು ಮಾಡಲಾಗಿದೆ ಎಂದು ಸಿಬಿಐ ಮಂಗಳವಾರ ದೆಹಲಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ.
ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಸಿಬಿಐ ಈ ಹೇಳಿಕೆ ಸಲ್ಲಿಸಿತು. ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 3ರವರೆಗೆ ನ್ಯಾಯಾಧೀಶರು ವಿಸ್ತರಿಸಿದರು. ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಸಲ್ಲಿಸಿರುವ ಚಾರ್ಜ್ ಶೀಟ್ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿದೆ. ಚಾರ್ಜ್ ಶೀಟ್ ಪರಿಗಣನೆಯನ್ನು ಸೆಪ್ಟೆಂಬರ್ 3ಕ್ಕೆ ತೆಗೆದುಕೊಳ್ಳಬೇಕೆ ಎಂಬ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
‘ಕೇಜ್ರಿವಾಲ್ ಅವರ ಇಚ್ಛೆಗೆ ಅನುಗುಣವಾಗಿ ಹಣ ಖರ್ಚು ಮಾಡಲಾಗಿದೆ. ಸಂಪೂರ್ಣ ಹಣ ಎಎಪಿ ನಿಧಿಯಿಂದಲೇ ಹೋಗಿದೆ. ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರದ ಅಭ್ಯರ್ಥಿಗಳಿಗೆ ತಲಾ ₹90 ಲಕ್ಷ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದರು’ ಎಂದು ಸಿಬಿಐ, ನ್ಯಾಯಾಲಯಕ್ಕೆ ತಿಳಿಸಿದೆ.