ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತಿಯ ವಯಸ್ಸಾದ ಪಾಲಕರ ಆರೈಕೆಯಲ್ಲಿನ ವೈಫಲ್ಯ ಪತ್ನಿಯ ಕ್ರೌರ್ಯವಾಗದು: ಹೈಕೋರ್ಟ್‌

ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು
Published 18 ಆಗಸ್ಟ್ 2024, 16:15 IST
Last Updated 18 ಆಗಸ್ಟ್ 2024, 16:15 IST
ಅಕ್ಷರ ಗಾತ್ರ

ಲಖನೌ: ಗಂಡನ ವಯಸ್ಸಾದ ತಂದೆ–ತಾಯಿಯ ಆರೈಕೆ ಮಾಡುವಲ್ಲಿ ಪತ್ನಿ ವಿಫಲಳಾಗಿದ್ದಾಳೆ ಎಂದ ಮಾತ್ರಕ್ಕೆ ಅದನ್ನು ಕ್ರೌರ್ಯ ಎನ್ನಲಾಗದು ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಪತ್ನಿ ತನ್ನ ತಂದೆ, ತಾಯಿಯನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂಬ ಆಧಾರದಲ್ಲಿ ವಿಚ್ಛೇದನ ನೀಡುವಂತೆ ಕೋರಿದ್ದ ತನ್ನ ಮನವಿಯನ್ನು ತಿರಸ್ಕರಿಸಿ  ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಹೈಕೋರ್ಟ್‌ ಈ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಲ್‌ ಸಿಂಗ್‌ ಹಾಗೂ ಡಿ.ರಮೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

‘ವಿವಾಹದ ನಂತರ, ಅತ್ತೆ–ಮಾವನ ಮನೆಯಿಂದ ದೂರ ಇರಲು ನಿರ್ಧರಿಸಿದ ಸಂದರ್ಭದಲ್ಲಿ, ವಯಸ್ಸಾದ ಪಾಲಕರ ಆರೈಕೆಯನ್ನು ಪತ್ನಿ ಸರಿಯಾಗಿ ಮಾಡುವಲ್ಲಿ ವಿಫಲಳಾಗಿದ್ದಾಳೆ ಎಂಬುದು ಕ್ರೌರ್ಯ ಎನಿಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಪ್ರತಿಯೊಂದು ಕುಟುಂಬದಲ್ಲಿನ ನಿರ್ದಿಷ್ಟ ಸನ್ನಿವೇಶವನ್ನು ಪರಿಶೀಲನೆ ನಡೆಸುವುದು ಅಥವಾ ಇಂತಹ ವಿಚಾರಗಳಿಗೆ ಸಂಬಂಧಿಸಿ ಕಾಯ್ದೆ/ತತ್ವಗಳನ್ನು ರೂಪಿಸುವುದು ನ್ಯಾಯಾಲಯದ ಕೆಲಸವಲ್ಲ’ ಎಂದೂ ಸ್ಪಷ್ಟಪಡಿಸಿದೆ.

‘ಕೌಟುಂಬಿಕ ಕ್ರೌರ್ಯವು ವಿಚ್ಛೇದನ ನೀಡುವುದಕ್ಕೆ ಕಾರಣವೆನಿಸಿದರೂ, ಕ್ರೌರ್ಯವನ್ನು ನಿರ್ದಿಷ್ಟ ಚೌಕಟ್ಟಿನಡಿ ವ್ಯಾಖ್ಯಾನ ಮಾಡುವುದಕ್ಕೆ ಸಿದ್ಧಸೂತ್ರ ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ನೌಕರಿ ಕಾರಣದಿಂದ ದೂರದ ಊರಿನಲ್ಲಿದ್ದೆ. ಹೀಗಾಗಿ, ವಯಸ್ಸಾದ ನನ್ನ ಪಾಲಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪತ್ನಿಗೆ ವಹಿಸಿದ್ದೆ. ಆದರೆ, ಪತ್ನಿಯು ನನ್ನ ಪಾಲಕರ ಆರೈಕೆಯನ್ನು ಸರಿಯಾಗಿ ಮಾಡಲಿಲ್ಲ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇದು ಕ್ರೌರ್ಯ’ ಎಂದು ಅರ್ಜಿದಾರ ಮನವಿಯಲ್ಲಿ ಹೇಳಿದ್ದರು.

‘ಪ್ರತಿವಾದಿಯಿಂದ (ಪತ್ನಿಯಿಂದ) ದೂರ ಇರುತ್ತಿದ್ದುದಾಗಿ ಹೇಳಿರುವ ಅರ್ಜಿದಾರ, ತನ್ನ ಪಾಲಕರ ಆರೈಕೆಯನ್ನು ಪತ್ನಿ ಮಾಡಬೇಕು ಎಂಬ ನಿರೀಕ್ಷೆಯನ್ನೂ ಹೊಂದಿದ್ದರು. ಅಲ್ಲದೇ, ತನ್ನ ಪಾಲಕರಿಗೆ ಯಾವ ಮಟ್ಟದ ಆರೈಕೆ ಅಗತ್ಯವಿತ್ತು ಅಥವಾ ಅಪೇಕ್ಷಣೀಯವಾಗಿತ್ತು ಎಂಬುದನ್ನು ಹೇಳಿಲ್ಲ. ಅಲ್ಲದೇ, ತನ್ನ ಪತ್ನಿ ಕ್ರೂರವಾಗಿ ಅಥವಾ ಅಮಾನವೀಯವಾಗಿ ವರ್ತಿಸಿದ್ದಾಳೆ ಎಂಬ ಆರೋಪವನ್ನು ಸಾಬೀತುಪಡಿಸಿಲ್ಲ’ ಎಂದೂ ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT