ಹೈದರಾಬಾದ್: ಅಸ್ತಮಾ ರೋಗಿಗಳಿಗೆ ವರಪ್ರಸಾದ ಎಂದೇ ನಂಬಲಾಗಿರುವ 'ಮೀನು ಪ್ರಸಾದ' ಔಷಧ ಖ್ಯಾತಿಯ ಬಥಿನಿ ಹರಿನಾಥ ಗೌಡ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಸಂಜೆ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಗೌಡ ಅವರ ನಿಧನಕ್ಕೆ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ಸಂಸದ ಎ.ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಏನಿದು ಮೀನು ಪ್ರಸಾದ?
ಮ್ಯೂರೆಲ್ ಮೀನು ಮತ್ತು ಗಿಡ ಮೂಲಿಕೆಯ ಮಿಶ್ರಣವೇ ಈ ಮೀನು ಪ್ರಸಾದ. ಇದು ಅಸ್ತಮಾಕ್ಕೆ ರಾಮಬಾಣ ಎಂದು ನಂಬಲಾಗಿದೆ. ಪ್ರತಿ ವರ್ಷ ಮೃಗಶಿರ ಕಾರ್ತಿಕ ದಿನದಂದು ಅಸ್ತಮಾ ರೋಗಿಗಳಿಗೆ ಮೀನು ಪ್ರಸಾದವನ್ನು ಉಚಿತವಾಗಿ ನೀಡಲಾಗುತ್ತದೆ. ಮೀನು ಪ್ರಸಾದ ನೀಡುವುದನ್ನು ಬಥಿನಿ ಕುಟುಂಬ ಸುಮಾರು 100 ವರ್ಷಗಳಿಂಲೂ ನಡೆಸಿಕೊಂಡು ಬಂದಿದೆ ಎಂದು ಹೇಳಲಾಗಿದ್ದು, ತಮ್ಮ ಪೂರ್ವಜರಂತೆ ಹರಿನಾಥ ಗೌಡ ಅವರು ಈ ಆಚರಣೆಯನ್ನು ಮುಂದುವರಿಸಿದ್ದರು.
ಮೀನು ಪ್ರಸಾದ ನೀಡುವುದಕ್ಕೆ ಆಕ್ಷೇಪ
ಅಸ್ತಮಾ ರೋಗಿಗಳಿಗೆ ಮೀನು ಪ್ರಸಾದ ನೀಡುವುದರ ಬಗ್ಗೆ ಅನೇಕ ವಿಚಾರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೊಂದು ಶುದ್ಧ ಮೂಡನಂಬಿಕೆ ಎಂದು ಹೇಳಿದ್ದರು. ಮೀನು ಪ್ರಸಾದದ ಔಷಧಿಯ ಗುಣದ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಹೀಗಿದ್ದರೂ ‘ಪ್ರಸಾದ’ ಸ್ವೀಕರಿಸಲು ಪ್ರತಿ ವರ್ಷ ಸಾವಿರಾರು ಜನರು ಬಥಿನಿ ಕುಟುಂಬಕ್ಕೆ ಆಗಮಿಸುತ್ತಿದ್ದಾರೆ.
ಕೋವಿಡ್‌ನಿಂದ ಮೂರು ವರ್ಷ ಸ್ಥಗಿತಗೊಂಡಿದ್ದ ಪ್ರಸಾದ ವಿತರಣೆ ಈ ವರ್ಷ ಜೂನ್ 9ರಂದು ಮತ್ತೆ ನಡೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.