ಪಟ್ನಾ: ಬಿಹಾರದ ಉತ್ತರ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಸರ್ಕಾರ ಭಾನುವಾರ ಎಚ್ಚರಿಕೆ ನೀಡಿದೆ. ಬಿರ್‌ಪುರ ಮತ್ತು ವಾಲ್ಮೀಕಿನಗರ ಜಲಾಶಯಗಳಿಂದ ಭಾನುವಾರ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದ್ದು ಇದರಿಂದ 13 ಜಿಲ್ಲೆಗಳ 16.28 ಲಕ್ಷ ಜನರಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಂಜೆ ಐದು ಗಂಟೆಯವರೆಗೆ 6.61 ಲಕ್ಷ ಕ್ಯುಸೆಕ್ ನೀರನ್ನು ಬಿರ್ಪುರ ಜಲಾಶಯದಿಂದ ಕೋಶಿ ನದಿಗೆ ಹರಿಸಲಾಗಿದ್ದು ಇಷ್ಟು ಪ್ರಮಾಣದ ನೀರನ್ನು ಕೋಶಿ ನದಿಗೆ ಹರಿಸಿದ್ದು 56 ವರ್ಷಗಳಲ್ಲಿ ಇದೇ ಮೊದಲು. ವಾಲ್ಮೀಕಿನಗರ ಜಲಾಶಯದಿಂದಲೂ 5.62 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಪಶ್ಚಿಮಬಂಗಾಳದ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.