ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಿಂದ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಕಾಶ: ಪರಿಹಾರ ಕಂಡುಹಿಡಿಯಿರಿ

ಕೇಂದ್ರ ಸರ್ಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 9 ಡಿಸೆಂಬರ್ 2022, 13:47 IST
ಅಕ್ಷರ ಗಾತ್ರ

ನವದೆಹಲಿ: ‘ಯುದ್ಧ ಹಾಗೂ ಇತರ ಕಾರಣಗಳಿಂದಾಗಿ ಉಕ್ರೇನ್‌, ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವ ದಿಸೆಯಲ್ಲಿ ಸೂಕ್ತ ಪರಿಹಾರ ಕಂಡುಹಿಡಿಯಿರಿ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಸೂಚಿಸಿದೆ.

ಈ ಸಂಬಂಧ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು,ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ವಿಕ್ರಂ ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇವುಗಳ ವಿಚಾರಣೆ ನಡೆಸಿತು.

‘ಈ ಹಂತದಲ್ಲಿ ಪರಿಹಾರ ಕಂಡುಹಿಡಿಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಲಿದೆ. ಹೀಗಾಗಿ ತುರ್ತಾಗಿ ಪರಿಹಾರ ಕಂಡುಹಿಡಿಯಬೇಕು. ಅಗತ್ಯವಿದ್ದರೆ ಕೇಂದ್ರವು ಇದಕ್ಕಾಗಿ ತಜ್ಞರ ಸಮಿತಿಯನ್ನೂ ರಚಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

‘ಕೇಂದ್ರ ಸರ್ಕಾರವು ನಮ್ಮ ಸಲಹೆಗೆ ಪ್ರಾಮುಖ್ಯತೆ ನೀಡುತ್ತದೆ ಎಂದು ಭಾವಿಸಿದ್ದೇವೆ. ವಿದ್ಯಾರ್ಥಿಗಳು ಈ ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ಕಾಪಾಡುವ ದೃಷ್ಟಿಯಿಂದ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತದೆ ಎಂದೂ ಅಂದುಕೊಂಡಿದ್ದೇವೆ. ಈ ವಿಚಾರದಲ್ಲಿ ನಿರ್ದೇಶನ ನೀಡುವ ಬದಲು ಎನ್‌ಎಂಸಿಯೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದೆ.

‘ಬಹುತೇಕ ವಿದ್ಯಾರ್ಥಿಗಳು ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಆದರೆ ಕ್ಲಿನಿಕಲ್‌ ತರಬೇತಿ ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ.ಪೋಷಕರು ತಮ್ಮ ಮಕ್ಕಳ ವ್ಯಾಸಂಗಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡಿರುತ್ತಾರೆ. ಪರಿಹಾರ ಸಾಧ್ಯವಾಗದೆ ಇದ್ದರೆ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಉಕ್ರೇನ್‌ನಿಂದ ವಾಪಾಸಾಗಿರುವ ವೈದ್ಯಕೀಯವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸಲಾಗದು ಎಂದು ಕೇಂದ್ರ ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಹಾಗೊಮ್ಮೆ ಅವಕಾಶ ನೀಡಿದರೆ ಇಡೀ ವೈದ್ಯಕೀಯ ವ್ಯವಸ್ಥೆಗೇ ತೊಂದರೆಯಾಗಲಿದೆ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT