ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌ನಲ್ಲೂ ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆ

Last Updated 15 ಮಾರ್ಚ್ 2020, 11:24 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ನಾಲ್ವರು ಕಾಂಗ್ರೆಸ್ ಶಾಸಕರು ಸ್ಪೀಕರ್‌ ರಾಜೇಂದ್ರ ತ್ರಿವೇದಿ ಅವರಿಗೆ ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 26ರಂದು ಚುನಾವಣೆ ನಡೆಯಲಿದೆ. ಹಾಗಾಗಿ, ಈ ರಾಜೀನಾಮೆಯ ಹಿಂದೆಯೂ ‘ಆಪರೇಷನ್‌ ಕಮಲ’ ಕೆಲಸ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ. ರಾಜೀನಾಮೆ ಕೊಟ್ಟ ಶಾಸಕರು ಯಾರು ಎಂಬುದನ್ನು ಸೋಮವಾರ ವಿಧಾನಸಭೆಯಲ್ಲಿ ಪ್ರಕಟಿಸುವುದಾಗಿ ತ್ರಿವೇದಿ ತಿಳಿಸಿದ್ದಾರೆ.

182 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 73 ಶಾಸಕರಿದ್ದಾರೆ. ಅವರಲ್ಲಿ ನಾಲ್ವರು ರಾಜೀನಾಮೆ ಕೊಟ್ಟರೆ ಆ ಪಕ್ಷದ ಬಲವು 69ಕ್ಕೆ ಇಳಿಯಲಿದೆ.

ರಾಜ್ಯಸಭೆ ಚುನಾವಣೆಯ ಕಾರಣಕ್ಕೆ ಶಾಸಕರ ಖರೀದಿ ನಡೆಯಬಹುದು ಎಂಬ ಅನುಮಾನದಲ್ಲಿ ತನ್ನ 14 ಶಾಸಕರನ್ನು ಕಾಂಗ್ರೆಸ್‌ ಪಕ್ಷವು ಜೈಪುರಕ್ಕೆ ಸ್ಥಳಾಂತರಿಸಿತ್ತು.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭಯ್‌ ಭಾರದ್ವಾಜ್‌, ರಮೀಲಾ ಬಾರಾ ಮತ್ತು ನರಹರಿ ಅಮಿನ್‌ ಅವರನ್ನು ಕಣಕ್ಕೆ ಇಳಿಸಿದೆ.

ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಸದಸ್ಯಬಲದಲ್ಲಿ ಎರಡು ಕ್ಷೇತ್ರಗಳನ್ನು ಮಾತ್ರ ಗೆಲ್ಲಲು ಸಾಧ್ಯ. ಮೂರನೇ ಸ್ಥಾನವನ್ನು ಗೆಲ್ಲಬೇಕಾದರೆ ವಿರೋಧ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಬೇಕು ಅಥವಾ ಕಾಂಗ್ರೆಸ್‌ನ ಶಾಸಕರು ಪಕ್ಷಾಂತರ ಮಾಡಬೇಕು.

ಕಾಂಗ್ರೆಸ್‌ನಿಂದ ಇಬ್ಬರು ಕಣದಲ್ಲಿದ್ದಾರೆ. ಹಿರಿಯ ಮುಖಂಡರಾದ ಶಕ್ತಿಸಿಂಹ ಗೋಹಿಲ್‌ ಮತ್ತು ಭರತಸಿಂಹ ಸೋಲಂಕಿ ಅವರು ಕಾಂಗ್ರೆಸ್‌ ಅಭ್ಯರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT