ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಎಮರ್ಜೆನ್ಸಿ' ಚಿತ್ರ ಬಿಡುಗಡೆ ಹೊತ್ತಲ್ಲಿ ಕಂಗನಾ ರನೌತ್ ಬಿಟ್ಟ ಮಾತಿನ ಬಾಣಗಳಿವು!

Published : 2 ಸೆಪ್ಟೆಂಬರ್ 2024, 11:55 IST
Last Updated : 2 ಸೆಪ್ಟೆಂಬರ್ 2024, 11:55 IST
ಫಾಲೋ ಮಾಡಿ
Comments

ನಟಿ ಹಾಗೂ ಲೋಕಸಭೆ ಸಂಸದೆ ಕಂಗನಾ ರನೌತ್‌ ಅವರು ಬಿಡುಗಡೆಗೆ ಸಜ್ಜಾಗಿರುವ ತಮ್ಮ ಸಿನಿಮಾ 'ಎಮರ್ಜೆನ್ಸಿ'ಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಮೇಲಿಂದ ಮೇಲೆ ಸಂದರ್ಶನಗಳು, ಮಾಧ್ಯಮಗೋಷ್ಠಿಗಳಲ್ಲಿ ಪಾಲ್ಗೊಂಡು ಅವರು ನೀಡಿರುವ ಹೇಳಿಕೆಗಳು, ಸಿನಿಮಾಕ್ಕಿಂತಲೂ ಹೆಚ್ಚಾಗಿ ಸದ್ದು ಮಾಡುತ್ತಿವೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತವಾದ 'ಎಮರ್ಜೆನ್ಸಿ'ಗೆ ಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಕಂಗನಾ, ಇಂದಿರಾ ಅವರ ಪಾತ್ರವನ್ನೂ ನಿಭಾಯಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್‌ 6ರಂದು ತೆರೆಗೆ ಬರಲು ಸಜ್ಜಾಗಿದೆ.

ಹಿಮಾಚಲ ಪ್ರದೇಶದ 'ಮಂಡಿ' ಕ್ಷೇತ್ರದ ಸಂಸದೆ ಕಂಗನಾ ಅವರು ಇಂತಹ ಸಮಯದಲ್ಲಿ ನೀಡಿರುವ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿವೆ. ಆಯ್ದ ಕೆಲವು ಇಲ್ಲಿವೆ.

'ರಾಹುಲ್ ಗಾಂಧಿ ಸಾಧನೆ ಏನು?'

ಇತ್ತೀಚೆಗೆ 'ನ್ಯೂಸ್‌24'ಗೆ (News24) ನೀಡಿದ ಸಂದರ್ಶನದಲ್ಲಿ, 'ಯಾವ ಮಾನದಂಡದ ಆಧಾರದಲ್ಲಿ ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ? ಅವರು ಯಾವ ಸಾಧನೆ ಮಾಡಿದ್ದಾರೆ' ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಿರೂಪಕರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 99 ಸ್ಥಾನಗಳನ್ನು ಗೆದ್ದಿದೆ. ಲೋಕಸಭೆ ಸದಸ್ಯ ಬಲದ ಶೇ 10ರಷ್ಟು ಸ್ಥಾನಗಳನ್ನು ಹೊಂದಿರುವ ಕಾರಣ ಕಾಂಗ್ರೆಸ್‌ಗೆ ವಿರೋಧ ಪಕ್ಷ ಮತ್ತು ರಾಹುಲ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ಕಂಗನಾ, 'ನೀವು ಈ ರೀತಿ ಹೇಳಿದರೆ, ನನ್ನಲ್ಲಿ ಉತ್ತರವಿಲ್ಲ' ಎಂದಿದ್ದಾರೆ.

ಸಂದರ್ಶನದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಂಸತ್ತಿನ ಕುರಿತು ಕಂಗನಾ ಹೊಂದಿರುವ ಜ್ಞಾನದ ಕುರಿತು ಟ್ರೋಲ್‌ ಮಾಡುತ್ತಿದ್ದಾರೆ. 'ಪ್ರಬುದ್ಧತೆಯ ಮಟ್ಟ ಹೇಗಿದೆ ನೋಡಿ' ಎಂದು ಕಾಲೆಳೆದಿದ್ದಾರೆ.

'ಮೊದಲ ದಲಿತ ರಾಷ್ಟ್ರಪತಿ ರಾಮ್‌ ಕೋವಿಡ್‌ ಜೀ'

'ದಿ ಲಲನ್‌ಟಾಪ್‌' (The Lallantop) ಶೋನಲ್ಲಿ ಪಾಲ್ಗೊಂಡಿದ್ದ ಕಂಗನಾ, ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಕುರಿತು ತಪ್ಪು ಮಾಹಿತಿ ನೀಡಿದ್ದಲ್ಲದೆ, ಹೆಸರನ್ನು ತಪ್ಪಾಗಿ ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಕೋವಿಂದ್‌ ಅವರನ್ನು ಮೊದಲ ದಲಿತ ರಾಷ್ಟ್ರಪತಿ ಎಂದು ಹೇಳಿದ ನಟಿ, ರಾಮನಾಥ್ ಕೋವಿಂದ್‌ ಎನ್ನುವ ಬದಲು 'ರಾಮ್‌ ಕೋವಿಡ್' ಎಂದು ಉಚ್ಚರಿಸಿದ್ದಾರೆ. ಸಂದರ್ಶಕರು ಕೂಡಲೇ, ಮೊದಲ ದಲಿತ ರಾಷ್ಟ್ರಪತಿ ಕೆ.ಆರ್‌. ನಾರಾಯಣ್‌ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಡಿಯೊದ ತುಣುಕುಗಳನ್ನು ಹಂಚಿಕೊಂಡಿರುವ ನೆಟ್ಟಿಗರು, ಕಂಗನಾ ಅವರನ್ನು ತೀವ್ರವಾಗಿ ಛೇಡಿಸಿದ್ದಾರೆ. ವ್ಯಕ್ತಿಯೊಬ್ಬರು, 'ಇದು ಕೋವಿಶೀಲ್ಸ್‌ ಮತ್ತು ಎಲೆಕ್ಸನ್‌ ಬಾಂಡ್‌ ಪರಿಣಾಮ' ಎಂದು ಕುಟುಕಿದ್ದಾರೆ. ಮತ್ತೊಬ್ಬರು, 'ಬಿಗಿನರ್ಸ್‌: ರಾಮ್‌ ನಾಥ್‌, ಲೆಜೆಂಡ್ಸ್‌: ರಾಮ್‌ ನಾಥ್‌ ಕೋವಿಂದ್‌, ಕಂಗನಾ: ರಾಮ್‌ ಕೋವಿಡ್‌' ಎಂದು ಕಿಚಾಯಿಸಿದ್ದಾರೆ.

ಇದರೆ ಬೆನ್ನಲ್ಲೇ ಎಕ್ಸ್‌/ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿರುವ ನಟಿ, ಮಾಧ್ಯಮ ಸಂಸ್ಥೆಯು ತಮ್ಮ ಹೇಳಿಕೆಯನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.

'ರಾಹುಲ್‌, ಎಮರ್ಜೆನ್ಸಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ?'

ಜನಪ್ರಿಯ ಕಾರ್ಯಕ್ರಮ 'ಆಪ್‌ ಕಿ ಅದಾಲತ್‌'ನಲ್ಲಿ (Aap Ki Adaalat) ಪಾಲ್ಗೊಂಡಿದ್ದ ವೇಳೆ, ರಾಹುಲ್‌ ಗಾಂಧಿ ಅವರಿಗೆ ಎಮರ್ಜೆನ್ಸಿ ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ದಿವಂಗತ ಇಂದಿರಾ ಗಾಂಧಿ ಅವರ ಮೊಮ್ಮಗ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಸಿನಿಮಾವನ್ನು ಮೆಚ್ಚಿಕೊಳ್ಳಬಹುದು ಎಂದು ಭಾವಿಸಿದ್ದೀರಾ ಎಂದು ನಿರೂಪಕ ರಜತ್ ಶರ್ಮಾ ಪ್ರಶ್ನಿಸಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಕಂಗನಾ, ಕೆಲ ಕ್ಷಣ ಮೌನವಹಿಸಿ ನಂತರ 'ಅವರು ಮನೆಯಲ್ಲಿ ಟಾಮ್‌ ಅಂಡ್‌ ಜೆರ್ರಿ ಕಾರ್ಟೂನ್‌ ನೋಡುತ್ತಾರೆ ಎಂದಾದರೆ, ನನ್ನ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಹೇಗೆ ಸಾಧ್ಯ?' ಎಂದು ಮರುಪ್ರಶ್ನೆ ಎಸೆದಿದ್ದಾರೆ.

ಮುಂದುವರಿದು, ರಾಹುಲ್‌ ಅವರು ತಮ್ಮ 'ಪ್ರಿನ್ಸ್‌' (ರಾಜಕುಮಾರ) ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಇಲ್ಲವಾದರೆ, ಭಾರತೀಯ ರಾಜಕೀಯದಲ್ಲಿ 'ಕಾರ್ಟೂನ್‌' ಆಗಿಯೇ ಉಳಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಬೆಂಬಲಿಗರು ಕಿಡಿಕಾರಿದ್ದಾರೆ. ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.

'ಆಕೆಯ ಸಿನಿಮಾಗಳಿಗಿಂತ ಟಾಮ್‌ ಅಂಡ್‌ ಜೆರ್ರಿ ಎಷ್ಟೋ ಪಾಲು ಚೆನ್ನಾಗಿರುತ್ತವೆ' ಎಂದು ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

'ಬಾಂಗ್ಲಾ ದಂಗೆಯಂತಹ ಪ್ರತಿಭಟನೆಗೆ ರೈತರ ಯೋಜನೆ'

ಕಂಗನಾ ಅವರು, ಬಾಂಗ್ಲಾದೇಶದಲ್ಲಿ ಸೃಷ್ಟಿಯಾದ ರಾಜಕೀಯ ಅಸ್ಥಿರತೆಗೂ, ಭಾರತದಲ್ಲಿ ನಡೆದ ರೈತರ ಪ್ರತಿಭಟನೆಗಳಿಗೂ ಸಂಬಂಧ ಕಲ್ಪಿಸಿ ಮಾತನಾಡಿರುವುದು ಭಾರಿ ವಿವಾದ ಸೃಷ್ಟಿಸಿದೆ. ಸಂಸದೆಯ ಹೇಳಿಕೆಯಿಂದ ಬಿಜೆಪಿಯೂ ಅಂತರ ಕಾಯ್ದುಕೊಂಡಿದೆ.

ಕೇಂದ್ರ ಸರ್ಕಾರ ಸದ್ಯ ಹಿಂಪಡೆದಿರುವ ಕೃಷಿ ಕಾಯ್ದೆಗಳ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದ ರೈತರು, ಬಾಂಗ್ಲಾದೇಶ ಮಾದರಿಯ ಅರಾಜಕತೆ ಸೃಷ್ಟಿಸಲು ಯೋಜಿಸಿದ್ದರು ಎಂದು ಕಂಗನಾ ಹೇಳಿದ್ದಾರೆ.

'ರೈತರು ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿದ ಸ್ಥಳದಲ್ಲಿ ಸಾಕಷ್ಟು ಹೆಣಗಳು ನೇತಾಡುತ್ತಿದ್ದವು. ಅತ್ಯಾಚಾರಗಳೂ ನಡೆದಿದ್ದವು. ಬಾಂಗ್ಲಾ ಮಾದರಿಯಲ್ಲಿ ಅರಾಜಕತೆ ಸೃಷ್ಟಿಸುವ ಯೋಜನೆ ನಡೆದಿತ್ತು' ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

'ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಮತ್ತು ಸೇನೆ, ಪೊಲೀಸರು ಇಲ್ಲದೇ ಇದ್ದಿದ್ದರೆ ಬಾಂಗ್ಲಾದೇಶದಲ್ಲಿ ನಡೆದಂತೆ ನಮ್ಮಲ್ಲೂ ಆಗಲು ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದ ನಂತರವೂ ರೈತರು ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಸರ್ಕಾರವು ಕಾಯ್ದೆಗಳನ್ನು ವಾಪಸ್‌ ಪಡೆಯಲಿದೆ ಎಂಬ ಅಂದಾಜು ಅವರಿಗೆ ಇರಲಿಲ್ಲ' ಎಂದೂ ಹೇಳಿದ್ದಾರೆ.

ಸಂಸದೆಯ ಮಾತಿನ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ಕಂಗನಾ ಅವರ ನಿಲುವನ್ನು ಪಕ್ಷ ಒಪ್ಪುವುದಿಲ್ಲ. ಭದ್ರತೆಯ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

'ಮೂರೇ ಜಾತಿ'

ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಕಂಗನಾ ಅವರು 'ದಿ ಲಲನ್‌ಟಾಪ್‌' ಸಂದರ್ಶನದಲ್ಲೇ ಮಾತನಾಡಿದ್ದರು. ದೇಶದಲ್ಲಿ ಇರುವುದು ಮೂರೇ ಜಾತಿ ಎಂದು ಪ್ರತಿಪಾದಿಸಿದ್ದ ಅವರು ಜಾತಿಗಣತಿಯ ಅಗತ್ಯವೇ ಇಲ್ಲ ಎಂದಿದ್ದರು. 'ಇರುವುದೇ ಮೂರು ಜಾತಿ – ಬಡವರು, ರೈತರು ಮತ್ತು ಮಹಿಳೆಯರು ಮಾತ್ರ. ನಾಲ್ಕನೇ ಜಾತಿ ಇರಬಾರದು' ಎಂದು ಹೇಳಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ್ದ ಸಂಸದೆ, 'ಜಾತಿ ವಿಚಾರದಲ್ಲಿ ಯೋಗಿ ಆದಿತ್ಯನಾಥರ ನಿಲವೇ ನನ್ನದೂ ಆಗಿದೆ. ಒಟ್ಟಾಗಿ ಇರೋಣ, ಚೆನ್ನಾಗಿರೋಣ. ನಾವು ಬೇರೆಬೇರೆಯಾದರೆ, ನಾಶವಾಗುತ್ತೇವೆ' ಎಂದು ಪ್ರತಿಪಾದಿಸಿದ್ದರು.

ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇಥ್, ದೇಶದಲ್ಲಿ ದಲಿತರು ಮತ್ತು ಬುಡಕಟ್ಟು ಜನರ ಸ್ಥಿತಿ ಹೇಗಿದೆ ಎಂಬುದು ಮೇಲ್ಜಾತಿಯವರಾದ ನಟಿಗೆ ಗೊತ್ತಿಲ್ಲ ಎಂದು ಗುಡುಗಿದ್ದಾರೆ.

ಇದು ಕೇಸರಿ ಪಕ್ಷದ ಅಧಿಕೃತ ಹೇಳಿಕೆಯೇ ಎಂದು ನೆಟ್ಟಿಗರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿರುವ ಕಂಗನಾ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬರು, 'ಕಂಗನಾ ಅವರಲ್ಲಿ ಅಷ್ಟೊಂದು ಸಮಯ ಇದೆಯೇ? ರಾಜಕೀಯದಲ್ಲಿರುವ ನನ್ನ ಹಲವು ಸ್ನೇಹಿತರು ತಮ್ಮ ಕ್ಷೇತ್ರ ವ್ಯಾಪ್ತಿಯ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಫೋನ್‌ನಲ್ಲಿ ಒಂದು ನಿಮಿಷ ಮಾತನಾಡುವುದಕ್ಕೂ ಸಮಯ ಸಿಗುವುದಿಲ್ಲ. ಅವರನ್ನು ಸಂಪರ್ಕಿಸಬೇಕೆಂದರೆ ಸಾಕಷ್ಟು ಪ್ರಯಾಸಪಡಬೇಕು. ಇವರು (ಕಂಗನಾ) ದೀರ್ಘಾವಧಿಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಬಹುದು ಎನಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ತೆರೆಗೆ ಬರಲು ಸಜ್ಜಾಗಿರುವ 'ಎಮರ್ಜೆನ್ಸಿ'ಗೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಇನ್ನೂ ಅನುಮತಿ ದೊರೆತಿಲ್ಲ. 'ಸಿಬಿಎಫ್‌ಸಿಯು ನನ್ನ ಸಿನಿಮಾಗೆ ಪ್ರಮಾಣಪತ್ರ ನೀಡಲು ಮೀನಾಮೇಷ ಎಣಿಸುತ್ತಿದೆ. ಚಿತ್ರದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿದೆ' ಎಂದು ನಟಿ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT