ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20: ಅಧ್ಯಕ್ಷರ ಸಂಗಾತಿಗಳಿಗೆ ವಿಶೇಷ ಭೋಜನ, ಬೀದಿ ಆಹಾರ, ಸಿರಿಧಾನ್ಯ ಖಾದ್ಯ

Published 9 ಸೆಪ್ಟೆಂಬರ್ 2023, 13:51 IST
Last Updated 9 ಸೆಪ್ಟೆಂಬರ್ 2023, 13:51 IST
ಅಕ್ಷರ ಗಾತ್ರ

ನವದೆಹಲಿ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರ ಬಾಳ ಸಂಗಾತಿಗಳಿಗೆ ಶನಿವಾರ ವಿಶೇಷ ಊಟೋಪಚಾರ ಮಾಡಲಾಗಿತ್ತು.

ಜೈಪುರ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಮಧ್ಯಾಹ್ನದ ಭೋಜನವನ್ನು ಇವರು ಸವಿದರು. ಆಧುನಿಕ ಕಲೆಯ ರಾಷ್ಟ್ರೀಯ ಗ್ಯಾಲರಿ (ಎನ್‌ಜಿಎಂಎ)ಯಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಆಧಾರಿತ ಶ್ರೀಮಂತ ಕಲಾ ಪ್ರದರ್ಶನದಲ್ಲಿ ಅಧಿಕಾರಿಗಳು ಸುತ್ತು ಹಾಕಿಸಿದರು. ಐಎಆರ್‌ಐಗೆ ಭೇಟಿ ನೀಡಿ ಭಾರತೀಯ ಕೃಷಿ ಕುರಿತು ಮಾಹಿತಿ ಪಡೆದರು.

ಇದರೊಂದಿಗೆ ಸಿರಿಧಾನ್ಯದ ಖಾದ್ಯಗಳ ಜತೆಗೆ ಭಾರತದ ಪ್ರಸಿದ್ಧ ಬೀದಿಬದಿ ತಿನಿಸುಗಳ (ಸ್ಟ್ರೀಟ್‌ ಫುಡ್‌) ಪರಿಚಯ ಮತ್ತು ಅವುಗಳನ್ನು ಆಸ್ವಾದಿಸುವ ಅವಕಾಶವನ್ನೂ ಮಾಡಿಕೊಡಲಾಗಿತ್ತು.

‘ಟರ್ಕಿಯ ಪ್ರಥಮ ಮಹಿಳೆ, ಜಪಾನ್, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಮಾರಿಷಸ್‌ನ ರಾಷ್ಟ್ರಗಳ ಪ್ರಮುಖರ ಬಾಳ ಸಂಗಾತಿಗಳು ಈ ಕಿರು ಪ್ರವಾಸದಲ್ಲಿ ಪಾಲ್ಗೊಂಡರು. ಕೆಲವರು ನೇಕಾರಿಕೆಯ ಸಾಧನದಲ್ಲಿ ಒಂದಷ್ಟು ಹೊತ್ತು ಕಳೆದರು. ಭಾರತದ ನಾಗರಿಕತೆ ಸಾಗಿಬಂದ ಪರಂಪರೆ ವೀಕ್ಷಿಸಿ ಸಂಭ್ರಮಿಸಿದರು’ ಎಂದು ಮೂಲಗಳು ತಿಳಿಸಿವೆ.

ಪೇಯಿಂಟಿಂಗ್‌, ಕಲಾಕೃತಿ, ಛಾಯಾಚಿತ್ರಗಳನ್ನು ಒಳಗೊಂಡ 1954ರಲ್ಲಿ ಅಂದಿನ ಉಪರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಉದ್ಘಾಟಿಸಿದ ಎನ್‌ಜಿಎಂಎದಲ್ಲಿ ಇವರು ಬಹಳಷ್ಟು ಹೊತ್ತು ಕಾಲ ಕಳೆದರು. ಇದಕ್ಕೂ ಮೊದಲು ಪೂಸಾ ಕ್ಯಾಂಪಸ್‌ನಲ್ಲಿ ಸಿರಿಧಾನ್ಯಗಳ ಕುರಿತ ಮಾಹಿತಿ ಪಡೆದರು. ವಿವಿಧ ರಾಷ್ಟ್ರಗಳ ನಾಯಕರ ಬಾಳಸಂಗಾತಿಗಳು ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದು ಕಂಡುಬಂತು ಎಂದು ಮೂಲಗಳು ಹೇಳಿವೆ.

ಇಂಡೊನೇಷ್ಯಾದ ಅಧ್ಯಕ್ಷ ಜೊಕೊ ವಿಡುಡು ಅವರ ಪುತ್ರ ಹಾಗೂ ಕುಟುಂಬದ ಸದಸ್ಯರು ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT