ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಟರ್‌ ಜೆ&ಕೆ’: ಹೊಸ ಯುಗಕ್ಕೆ ಆಜಾದ್‌ ಆಹ್ವಾನ, ಸೆಪ್ಟೆಂಬರ್‌ 4ರಂದು ರ್‍ಯಾಲಿ

ಹೊಸ ಪಕ್ಷ ಘೋಷಣೆ ಸಾಧ್ಯತೆ
Last Updated 30 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಶ್ರೀನಗರ: ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌ ಅವರು ಸೆಪ್ಟೆಂಬರ್‌ 4ರಂದು ‘ಬೆಟರ್‌ ಜೆ ಆ್ಯಂಡ್‌ ಕೆ’ ಎನ್ನುವ ರ್‍ಯಾಲಿಯೊಂದನ್ನು ಆಯೋಜಿಸಲಿದ್ದಾರೆ. ಈ ವೇಳೆ ಅಜಾದ್‌ ಅವರುಹೊಸ ಪಕ್ಷವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಅಜಾದ್‌ ಅವರ ಹೊಸ ಪಕ್ಷಕ್ಕೆ ಸೇರ್ಪಡೆಯಾಗುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ51ಕ್ಕೂ ಹೆಚ್ಚು ಮುಖಂಡರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.ಜಮ್ಮು ಕಾಶ್ಮೀರ ವಿಧಾನಸಭೆಯ ಮಾಜಿ ಉಪಸ್ಪೀಕರ್‌ ಗುಲಾಂ ಹೈದರ್‌ ಮಲಿಕ್‌ ಸೇರಿದಂತೆ ಮೂವರು ಕಾಂಗ್ರೆಸ್‌ ನಾಯಕರು ಆಜಾದ್‌ ಅವರ ಹೊಸ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್ವರ್‌ ಸಿಂಗ್‌ ಮನ್‌ಹಾಸ್‌ ಅವರೂ ಪಕ್ಷ ತೊರೆದಿದ್ದಾರೆ. ಜೊತೆಗೆ ಅಪ್ನಿ ಪಾರ್ಟಿಯ ಪ್ರಮುಖ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿ, ಆಜಾದ್‌ ಅವರ ಹೊಸ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.

‘ಕಳೆದುಕೊಂಡದ್ದನ್ನು ಪಡೆದುಕೊಳ್ಳುವುದಕ್ಕಾಗಿ ಎಲ್ಲರೂ ಸಿದ್ಧರಾಗಿ. ಸೈನಿಕ್‌ ಕಾಲೊನಿಯಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ‘ಬೆಟರ್‌ ಜೆ ಆ್ಯಂಡ್‌ ಕೆ’ ರ್‍ಯಾಲಿಯಲ್ಲಿ ಭಾಗವಹಿಸಿ’ ಎಂದು ಆಜಾದ್‌ ಅವರು ಜಮ್ಮು ಮತ್ತು ಕಾಶ್ಮೀರದ ಜನರನ್ನು ಕೋರಿದ್ದಾರೆ.

‘ಹೊಸ ಆರಂಭಕ್ಕಾಗಿ ಹೃದಯ ತುಂಬಿ ಶುಭಾಶಯಗಳನ್ನು ಹೇಳಲು ಜಮ್ಮು ಮತ್ತು ಕಾಶ್ಮೀರದ ಉದ್ದಗಲದಿಂದ ಬರುವ ಜನರನ್ನು ಹಾಗೂ ರಾಜಕೀಯ ಪಕ್ಷಗಳ ನಾಯಕರನ್ನು ನೋಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

ಕಾಂಗ್ರೆಸ್‌ಗೆ ಮಂಗಳವಾರ ರಾಜೀನಾಮೆ ನೀಡಿದವರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್‌, ಮಾಜಿ ಸಚಿವರಾದ ಅಬ್ದುಲ್‌ ಮಜೀದ್‌ ವಾನಿ, ಮನೋಹರ್‌ ಲಾಲ್‌ ಶರ್ಮಾ ಪ್ರಮುಖರು.

ಪಿಡಿಪಿ ಸ್ವಾಗತ: ಆಜಾದ್‌ ಅವರ ಹೊಸ ಪಕ್ಷ ಘೋಷಣೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮತ್ತು ಅಪ್ನಿ ಪಾರ್ಟಿ, ‘ಹೊಸ ಪಕ್ಷ ಘೋಷಣೆಯ ಹಿಂದೆ ಬಿಜೆಪಿಯ ಕೇಂದ್ರ ನಾಯಕರ ಕುಮ್ಮಕ್ಕು ಕೆಲಸ ಮಾಡಿದೆ’ ಎಂದು ಆರೋಪಿಸಿವೆ. ಆದರೆ, ಆಜಾದ್‌ ಅವರ ನಡೆಯನ್ನು ಪಿಡಿಪಿ ಸ್ವಾಗತಿಸಿದೆ.

ಆಜಾದ್‌ ಭೇಟಿಯಾದ ಕಾಂಗ್ರೆಸ್‌ನ ಮೂವರು ನಾಯಕರು: ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ, ಭುಪಿಂದರ್‌ ಹೂಡಾ ಮತ್ತು ಪೃಥ್ವಿರಾಜ್‌ ಚವಾಣ್‌ ಅವರು ಆಜಾದ್‌ ಅವರನ್ನು ಮಂಗಳವಾರ ಭೇಟಿ ಮಾಡಿದ್ದಾರೆ. ಆನಂದ್‌ ಶರ್ಮಾ ಅವರು ಶನಿವಾರವೂ ಆಜಾದ್‌ ಅವರನ್ನು ಭೇಟಿ ಮಾಡಿದ್ದರು.

ಆಜಾದ್‌ ಅವರು ರ್‍ಯಾಲಿಯನ್ನು ಆಯೋಜಿಸಲಿದ್ದಾರೆ ಎನ್ನುವ ಘೋಷಣೆ ಬಂದ ದಿನವೇ ಈ ನಾಯಕರು ಆಜಾದ್ ಅವರನ್ನು ಭೇಟಿ ಮಾಡಿದ್ದಾರೆ. ಸಭೆಯಲ್ಲಿ ಚರ್ಚಿಸಿದ ವಿಷಯದ ಕುರಿತು ಯಾವ ನಾಯಕರು ಮಾಹಿತಿ ನೀಡಿಲ್ಲ. ‘ಕೈಗೊಂಬೆ ಅಧ್ಯಕ್ಷ’ರೊಬ್ಬರು ಆಯ್ಕೆಯಾದರೆ, ಪಕ್ಷವು ಉಳಿಯುವುದಿಲ್ಲ ಎಂದು ಪೃಥ್ವಿರಾಜ್‌ ಚವಾಣ್‌ ಭಾನುವಾರ ಎಚ್ಚರಿಸಿದ್ದರು.

‘ಹೊಸ ಪಕ್ಷ ಘೋಷಣೆ: ಬಿಜೆಪಿಗೆ ಅನುಕೂಲ’
‘ಮುಸ್ಲಿಂ ಮತಗಳನ್ನು ಆಜಾದ್‌ ಅವರ ಹೊಸ ಪಕ್ಷವು ಇನ್ನಷ್ಟು ಒಡೆಯಲಿದೆ. ಇದು ಬಿಜೆಪಿಗೆ ಸಹಕಾರಿಯಾಗಿದೆ. ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಜಮ್ಮುವಿನ ಚಿನಾಬ್‌ ಮತ್ತು ಪೀರ್‌ ಪಂಜಾಲ್‌ ಪ್ರದೇಶಗಳಲ್ಲಿ ಬಿಜೆಪಿಯು ಹೆಚ್ಚು ಸೀಟುಗಳನ್ನು ಗೆಲ್ಲಲಿದೆ’ ಎಂದು ರಾಜಕೀಯ ವಿಶ್ಲೇಷಕ ಜಾವೇದ್‌ ತ್ರಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬೆಳವಣಿಗೆಯು ಕಾಂಗ್ರೆಸ್‌ಗಿಂತ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಕ್ಕೆ ಹೊಡೆತ ಕೊಡಲಿದೆ. ಕಾಶ್ಮೀರ ಭಾಗದಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳು ಬೀಳಲಿವೆ. ಹೀಗಾದಲ್ಲಿ ಜಮ್ಮು ಮತ್ತು ಕಾಶ್ಮೀರಲ್ಲಿ ಹಿಂದೂ ಒಬ್ಬ ಮುಖ್ಯಮಂತ್ರಿಯಾಗಬೇಕು ಎನ್ನುವ ಬಿಜೆಪಿ ಕನಸು ನನಸಾಗಲಿದೆ. ಒಂದು ವೇಳೆ ಹಿಂದೂ ಒಬ್ಬರು ಮುಖ್ಯಮಂತ್ರಿ ಆಗದಿದ್ದರೆ ಆಜಾದ್‌ ಅವರೇ ಮುಖ್ಯಮಂತ್ರಿ ಆಗಬಹುದು’ ಎಂದರು.

ಪಕ್ಷಾಂತರ ಚುಟುವಟಿಕೆಚುರುಕು
ಗುಲಾಂ ನಬಿ ಆಜಾದ್‌ ಅವರ ರಾಜೀನಾಮೆ ಮತ್ತು ಹೊಸ ಪಕ್ಷದ ಘೋಷಣೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಮುಖಂಡರ ಪಕ್ಷಾಂತರ ಚುಟುವಟಿಕೆಗಳು ಮತ್ತೊಮ್ಮೆ ಶುರುಕುಗೊಂಡಿವೆ.

ಈ ಮೊದಲು, 2018ರಲ್ಲಿ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರವು ಪತನಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷಾಂತರ ಚಟುವಟಿಕೆಯು ಚುರುಕುಕೊಂಡಿತ್ತು. ಈ ವೇಳೆ, ಪಿಡಿಪಿಯ ಹಲವು ಮುಖಂಡರು ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪೀಪಲ್ಸ್‌ ಕಾನ್ಫರೆನ್ಸ್‌ ಪಕ್ಷಕ್ಕೆ ಸೇರಿದ್ದರು.

2020ರಲ್ಲಿ ಅಲ್ತಾಫ್‌ ಬುಖಾರಿ ಅವರು ಹೊಸ ಪಕ್ಷವನ್ನುಕಟ್ಟಿದರು. ಪಿಡಿಪಿ, ಕಾಂಗ್ರೆಸ್‌ ಸೇರಿದಂತೆ ಇಲ್ಲಿನ ಹಲವು ಸಣ್ಣ ಪುಟ್ಟ ಪಕ್ಷಗಳ ಮುಖಂಡರು ಬುಖಾರಿ ಅವರ ಅಪ್ನಿ ಪಾರ್ಟಿಗೆ ಸೇರ್ಪಡೆಗೊಂಡರು. 2021ರಲ್ಲಿ ಪಿಡಿಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಹಲವು ಮುಖಂಡರು, ಸಜ್ಜಾದ್‌ ಲೋನ್‌ ಅವರ ಪೀಪಲ್ಸ್‌ ಕಾನ್ಫರೆನ್ಸ್‌ ಪಕ್ಷಕ್ಕೆ ಸೇರಿದರು.

ಈಗ ಕಾಂಗ್ರೆಸ್‌ನ ಹಲವು ಮುಖಂಡರು ಆಜಾದ್‌ ಅವರ ಹೊಸ ಪಕ್ಷಕ್ಕೆ ಸೇರಲು, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT