ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿದೆ ಕರಾಳ ದಿನ: ಮಾನವ ಕುಲಕ್ಕೆ 11 ಸಾವಿರ ವಿಜ್ಞಾನಿಗಳ ಎಚ್ಚರಿಕೆ

ಜಾಗತಿಕ ಹವಾಮಾನ ತುರ್ತುಪರಿಸ್ಥಿತಿ
Last Updated 6 ನವೆಂಬರ್ 2019, 19:55 IST
ಅಕ್ಷರ ಗಾತ್ರ

ನವದೆಹಲಿ: ನಿಸರ್ಗದ ಮೇಲೆ ಮನುಷ್ಯ ಲಂಗು ಲಗಾಮಿಲ್ಲದೆ ನಡೆಸುವ ಆಕ್ರಮಣದಿಂದಾಗಿ ಇಡೀ ಜಗತ್ತೇ ಹವಾಮಾನ ತುರ್ತು ಪರಿಸ್ಥಿತಿಗೆ ಒಳಗಾಗಿದೆ ಎಂದು153 ದೇಶಗಳ 11,258 ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಬಲ್ಲ ಇತರ ಮಾನವ ಚಟುವಟಿಕೆಗಳಲ್ಲಿ ಗಾಢ ಮತ್ತು ದೀರ್ಘಾವಧಿ ಬದಲಾವಣೆ ಮಾಡಿಕೊಳ್ಳದಿದ್ದರೆ ‘ಈವರೆಗೆ ಕಂಡುಕೇಳಿಲ್ಲದ ವೇದನೆ’ ಅನುಭವಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಯೊಸೈನ್ಸ್‌ ನಿಯತಕಾಲಿಕದಲ್ಲಿ ಪ್ರಟಕವಾದ ಪ್ರಬಂಧದಲ್ಲಿ ಹವಾಮಾನ ಬದಲಾವಣೆಯ ಪ್ರಸ್ತುತ ಸ್ಥಿತಿ ಮತ್ತು ಅದನ್ನು ತಡೆಯಬಲ್ಲ ಹಲವು ಕ್ರಮಗಳನ್ನು ಮುಂದಿಡಲಾಗಿದೆ. ಇದಕ್ಕೆ ಭಾರತದ 69 ವಿಜ್ಞಾನಿಗಳು ಸೇರಿ ಜಗತ್ತಿನ 11,258 ವಿಜ್ಞಾನಿಗಳು ಸಹಮತ ಸೂಚಿಸಿದ್ದಾರೆ.

ಸಾರ್ವಜನಿಕವಾಗಿ ಲಭ್ಯವಿರುವ 40ಕ್ಕೂ ಹೆಚ್ಚು ವರ್ಷಗಳ ದತ್ತಾಂಶಗಳ ಆಧಾರದಲ್ಲಿ ಈ ವಿಶ್ಲೇಷಣೆಯನ್ನು ಮುಂದಿಡಲಾಗಿದೆ. ಇಂಧನ ಬಳಕೆ, ಭೂ ಮೇಲ್ಮೈಯ ತಾಪ ಏರಿಕೆ, ಜನಸಂಖ್ಯೆ ಏರಿಕೆ, ಕಾಡು ನಾಶ, ಧ್ರುವ ಪ್ರದೇಶದ ಮಂಜುಗಡ್ಡೆ, ಫಲವತ್ತತೆ ಪ್ರಮಾಣ, ಒಟ್ಟು ಆಂತರಿಕ ಉತ್ಪನ್ನ ಮತ್ತು ಇಂಗಾಲ ಹೊರಸೂಸುವಿಕೆಯಂತಹ ವಿಚಾರಗಳನ್ನು ಈ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ.

ಆರೆಗಾನ್‌ ಸ್ಟೇಟ್‌ ಯುನಿವರ್ಸಿಟಿ ಕಾಲೇಜ್‌ ಆಫ್‌ ಫಾರೆಸ್ಟ್ರಿಯ ಪ್ರಾಧ್ಯಾಪಕರಾದ ವಿಲಿಯಂ ರಿಪಲ್‌ ಮತ್ತು ಕ್ರಿಸ್ಟೋಫರ್‌ ವೂಲ್ಫ್‌ ಅವರ ನೇತೃತ್ವದಲ್ಲಿ ವಿಜ್ಞಾನಿಗಳು ಈ ವಿಶ್ಲೇಷಣೆ ನಡೆಸಿದ್ದಾರೆ.

‘ಎಲ್ಲರಿಗೂ ಸಾಕಷ್ಟು ಆಹಾರ ಮತ್ತು ಇಂಧನ ಒದಗಿಸುವುದು ಮತ್ತು ಆ ಪೂರೈಕೆ ನಿಲ್ಲದಂತೆ ನೋಡಿಕೊಳ್ಳುವುದು ನಮ್ಮ ಮೂಲಭೂತ ತುಡಿತ. ಅದಕ್ಕಾಗಿ, ನಮಗೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಿಸರ್ಗವನ್ನು ಬಳಸಿಕೊಳ್ಳುತ್ತಿದ್ದೇವೆ. ಇದು ನಿಸರ್ಗಕ್ಕೆ ಅಪಾರ ಪ್ರಮಾಣದ ಹಾನಿ ಮಾಡಿದೆ’ ಎಂದು ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಜ್ಞಾನ್‌ ಪ್ರಕಾಶ್‌ ಶರ್ಮಾ ಹೇಳಿದ್ದಾರೆ. ವಿಜ್ಞಾನಿಗಳ ಪ್ರತಿಪಾದನೆಗೆ ಸಹಿ ಮಾಡಿದವರಲ್ಲಿ ಜ್ಞಾನ್ ಅವರೂ ಇದ್ದಾರೆ.

‘ಆಶಾಕಿರಣ’
ಮಾನವ ಕುಲವು ಭಾರಿ ಅಪಾಯ ಎದುರಿಸುತ್ತಿದೆ ಎಂದು ಎಚ್ಚರಿಸುವುದು ವಿಜ್ಞಾನಿಗಳ ನೈತಿಕ ಹೊಣೆಗಾರಿಕೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಥಾಮಸ್‌ ನ್ಯೂಸಮ್‌ ಹೇಳಿದ್ದಾರೆ.

‘ಸರ್ಕಾರದ ಸಮಿತಿಗಳು ಹವಾಮಾನ ತುರ್ತು ಪರಿಸ್ಥಿತಿಯ ಘೋಷಣೆಗಳನ್ನು ಹೊರಡಿಸುತ್ತಿವೆ. ಶಾಲಾ ಮಕ್ಕಳು ಕೂಡ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಸರಕ್ಕೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ದಾವೆಗಳು ಹೆಚ್ಚಾಗುತ್ತಿವೆ. ಜನರ ಚಳವಳಿಗಳು ಬದಲಾವಣೆಗಾಗಿ ಆಗ್ರಹಿಸುತ್ತಿವೆ. ಹವಾಮಾನ ತುರ್ತುಸ್ಥಿತಿಗೆ ವಿವಿಧ ದೇಶಗಳು, ರಾಜ್ಯಗಳು, ಪ್ರಾಂತ್ಯಗಳು, ನಗರ ಮತ್ತು ಉದ್ಯಮ ಸಂಸ್ಥೆಗಳು ಸ್ಪಂದಿಸುತ್ತಿವೆ’. ಇದು ಈಗಿನ ಹವಾಮಾನ ತುರ್ತುಪರಿಸ್ಥಿತಿಯಲ್ಲಿ ಆಶಾದಾಯಕ ಅಂಶಗಳು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಜನನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದು ಸಕಾರಾತ್ಮಕ ಅಂಶ. ಹಾಗೆಯೇ ಬ್ರೆಜಿಲ್‌ನ ಅಮೆಜಾನ್‌ ಕಾಡುಗಳ ನಾಶದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪವನ ಮತ್ತು ಸೌರ ವಿದ್ಯುತ್‌ ಬಳಕೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

**
ಕಳವಳದ ವಿಚಾರ

*ಭಾರತದಲ್ಲಿ ಮುಂಗಾರು ಋತುವಿನಲ್ಲಿ ಭಾರಿ ಬದಲಾವಣೆ ಆಗಿದೆ. ಇದು ಕೃಷಿ ಪದ್ಧತಿಯಲ್ಲಿ ಬಹಳಷ್ಟು ಪಲ್ಲಟಗಳಿಗೆ ಕಾರಣವಾಗಿದೆ

*ಮಾಂಸ ಉತ್ಪಾದನೆಯಲ್ಲಿ ಏರಿಕೆ, ಅರಣ್ಯ ಪ್ರಮಾಣ ಇಳಿಕೆ, ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರಿ ಏರಿಕೆ

*ಭೂ ಮೇಲ್ಮೈ ತಾಪದಲ್ಲಿ ಹೆಚ್ಚಳ, ಸಾಗರ ಮೇ‌ಲ್ಮೈ ಬಿಸಿ ಏರಿಕೆ, ಹವಾಮಾನದಲ್ಲಿ ತೀವ್ರ ವ್ಯತ್ಯಾಸಗಳು, ಸಮುದ್ರ ಮಟ್ಟ ಏರಿಕೆ, ಸಾಗರದಲ್ಲಿ ಇಂಗಾಲದ ಪ್ರಮಾಣ ಏರಿಕೆ

*ಆರ್ಕ್‌ಟಿಕ್‌ ಸಮುದ್ರ, ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಟಿಕ್‌ನಲ್ಲಿ ಮಂಜುಗಡ್ಡೆ ಪ್ರಮಾಣ ಇಳಿಕೆ

*
ಜಾಗತಿಕ ಮಟ್ಟದಲ್ಲಿ 40 ವರ್ಷಗಳಿಂದ ಮಾತುಕತೆ ನಡೆಯುತ್ತಿದ್ದರೂ ಎಲ್ಲವೂ ಎಂದಿನಂತೆಯೇ ಮುಂದುವರಿದಿದೆ. ಬಿಕ್ಕಟ್ಟನ್ನು ತಡೆಯುವಲ್ಲಿ ನಾವು ವಿಫಲರಾಗಿದ್ದೇವೆ.
-ವಿಲಿಯಂ ಜೆ. ರಿಪಲ್‌, ಆರೆಗಾನ್‌ ಸ್ಟೇಟ್‌ ಯುನಿವರ್ಸಿಟಿ ಕಾಲೇಜ್‌ ಆಫ್‌ ಫಾರೆಸ್ಟ್ರಿಯ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT