ಪಣಜಿ: ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಬೆಟ್ಟ ಕಡಿಯಲು ಯಾರಿಗೂ ಅನುಮತಿ ನೀಡಿಲ್ಲ. ಆದರೆ ಅಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿಯಮದಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ₹1 ಕೋಟಿ ವರೆಗೂ ದಂಡ ವಿಧಿಸಲು ಯೋಜಿಸಲಾಗಿದೆ ಎಂದು ಗೋವಾದ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
ವಯನಾಡ್ ಭೂಕುಸಿತ ದುರಂತದ ಬೆನ್ನಲ್ಲೇ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಬೆಟ್ಟ, ಗುಡ್ಡಗಳನ್ನು ಕಡಿಯುವುದನ್ನು ತಡೆಗಟ್ಟಲು ಗೋವಾ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
'ಬೆಟ್ಟ ಕಡಿಯುವುದು ಅಥವಾ ಅಂತಹ ಅಕ್ರಮ ಚಟುವಟಿಕೆಗಳ ಮೂಲಕ ನಿಯಮ ಉಲ್ಲಂಘಿಸಿದರೆ ₹1 ಲಕ್ಷದಿಂದ ₹1 ಕೋಟಿ ವರೆಗೂ ದಂಡ ವಿಧಿಸಲು ನಿಯಮದಲ್ಲಿ ತಿದ್ದುಪಡಿ ತರಲಾಗುವುದು' ಎಂದು ಅವರು ತಿಳಿಸಿದ್ದಾರೆ.
'ಬೆಟ್ಟ ಕಡಿಯಲು ಟಿಸಿಪಿ ಇಲಾಖೆ ಅನುಮತಿ ನೀಡಿಲ್ಲ. ಈ ಜವಾಬ್ದಾರಿ ಎಲ್ಲ ಇಲಾಖೆಗಳ ಮೇಲೂ ಇದೆ' ಎಂದು ಅವರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ದೈತ್ಯ ರೀಸ್ ಮಾಗೋಸ್, ಪಣಜಿ ಬಳಿಯ ಗ್ರಾಮದ ಇಳಿಜಾರು ಬೆಟ್ಟದಲ್ಲಿ ಕಟ್ಟಡ ನಿರ್ಮಿಸಿದ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ತಾವು ಅನುಮತಿ ನೀಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.