ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಲು ಗೋಪಾಲಕೃಷ್ಣ ಗಾಂಧಿ ನಕಾರ

Last Updated 20 ಜೂನ್ 2022, 12:55 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮಾ ಗಾಂಧೀಜಿಯವರ ಮೊಮ್ಮಗ 77 ವರ್ಷದ ಗೋಪಾಲಕೃಷ್ಣ ಗಾಂಧಿಯವರು ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರಾಕರಿಸಿದ್ದಾರೆ. ಈ ಸ್ಥಾನಕ್ಕೆ ನನಗಿಂತಲೂ ಉತ್ತಮರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ. ತಮ್ಮ ನಿರ್ಧಾರ ಬದಲಿಸುವಂತೆ ವಿಪಕ್ಷಗಳ ಕೆಲ ನಾಯಕರು ಗಾಂಧಿ ಅವರ ಮನವೊಲಿಸಲು ಯತ್ನಿಸುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಸಹ ವಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ್ದರು.

ಮಂಗಳವಾರ, ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚಿಸಲು ಸಂಸತ್ ಭವನದಲ್ಲಿ ಅಂತಿಮ ಸಭೆಗೆ ಸಿದ್ಧತೆ ನಡೆಸಿದ್ದ ವಿಪಕ್ಷಗಳಿಗೆ ಮಧ್ಯಾಹ್ನ ಗೋಪಾಲಕೃಷ್ಣ ಗಾಂಧಿ ಬಿಡುಗಡೆ ಮಾಡಿರುವ 245 ಪದಗಳ ಹೇಳಿಕೆ ಹತಾಶೆ ಮೂಡಿಸಿದೆ. ರಾಷ್ಟ್ರಪತಿ ಚುನಾವಣಾ ಕಣವನ್ನು ಗಾಂಧಿ ವರ್ಸಸ್ ಗೊಡ್ಸೆ ಸಿದ್ಧಾಂತಗಳ ರಣಭೂಮಿಯಾಗಿ ಮಾಡಲು ವಿಪಕ್ಷಗಳು ಸಿದ್ಧತೆ ನಡೆಸಿದ್ದವು.

'ಪ್ರತಿಪಕ್ಷದ ಹಲವಾರು ಗೌರವಾನ್ವಿತ ನಾಯಕರು ರಾಷ್ಟ್ರಪತಿಯ ಅತ್ಯುನ್ನತ ಹುದ್ದೆಗೆ ಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ, ಈ ವಿಷಯವನ್ನು ಆಳವಾಗಿ ಪರಾಮರ್ಶಿಸಿದ ನಂತರ, ವಿರೋಧ ಪಕ್ಷದ ಅಭ್ಯರ್ಥಿಯು ಪ್ರತಿಪಕ್ಷಗಳ ಏಕತೆಯ ಜೊತೆಗೆ ರಾಷ್ಟ್ರೀಯ ಒಮ್ಮತ ಸೃಷ್ಟಿಸುವವರಾಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನನಗಿಂತ ಉತ್ತಮವಾಗಿ ಇದನ್ನು ಮಾಡುವವರು ಇತರರು ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಅಂತಹ ವ್ಯಕ್ತಿಗೆ ಅವಕಾಶವನ್ನು ನೀಡುವಂತೆ ನಾನು ನಾಯಕರಲ್ಲಿ ವಿನಂತಿಸಿದ್ದೇನೆ. ಡಾ ರಾಜೇಂದ್ರ ಪ್ರಸಾದ್ ಅವರು ಮೊದಲ ರಾಷ್ಟ್ರಪತಿಯಾಗಿ ಉದ್ಘಾಟಿಸಿದ ದೇಶದ ಅತ್ಯುನ್ನತ ಹುದ್ದೆಗೆ ಯೋಗ್ಯವಾದ ರಾಷ್ಟ್ರಪತಿಯನ್ನು ಭಾರತವು ಪಡೆಯಲಿ’ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಗಾಂಧಿ ಅವರನ್ನು ಕಣಕ್ಕಿಳಿಸಲು ಪ್ರತಿಪಕ್ಷಗಳು ಮುಂದಾಗಿದ್ದವು. ಆದರೆ, ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ಎನ್‌ಡಿಎ ಘೋಷಿಸಿದ ಬಳಿಕ ಕಾರ್ಯತಂತ್ರ ಬದಲಿಸಿದ ಪ್ರತಿಪಕ್ಷಗಳು ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿದ್ದವು. ಬಳಿಕ, ಗೋಪಾಲಕೃಷ್ಣ ಗಾಂಧಿ ಅವರನ್ನು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲಾಯಿತಾದರೂ ವೆಂಕಯ್ಯ ನಾಯ್ಡ ಎದುರು ಸೊತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT