ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು: ಕೇಸರಿ ದಿರಿಸಿನ ತಿರುವಳ್ಳುವರ್ ಚಿತ್ರ ಬಳಕೆ; ರಾಜಭವನದಿಂದ ವಿವಾದ

Published 24 ಮೇ 2024, 15:16 IST
Last Updated 24 ಮೇ 2024, 15:16 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಕವಿ, ಸಂತ ತಿರುವಳ್ಳುವರ್ ಅವರು ಕೇಸರಿ ದಿರಿಸು ಹಾಗೂ ವಿಭೂತಿ ಧರಿಸಿರುವಂತಹ ಭಾವಚಿತ್ರವನ್ನು ಬಳಸುವ ಮೂಲಕ ರಾಜ್ಯಪಾಲ ಆರ್.ಎನ್.ರವಿ ಅವರು ಈಗ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ರಾಜ್ಯದಲ್ಲಿ ಸಾಮಾನ್ಯವಾಗಿ ಜ. 16ರಂದು ‘ತಿರುವಳ್ಳುವರ್ ದಿನ’ ಆಚರಿಸಿದರೆ, ರಾಜಭವನದಲ್ಲಿ ಇದೇ ಮೊದಲ ಬಾರಿಗೆ ‘ವೈಕಾಸಿ ಅನುಶಂ’ ನಿಮಿತ್ತ ಶುಕ್ರವಾರ ಅವರ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂಬಂಧ ಸಿದ್ಧಪಡಿಸಿದ ಆಹ್ವಾನಪತ್ರಿಕೆಯಲ್ಲಿ ತಿರುವಳ್ಳುವರ್ ಅವರು ಕೇಸರಿ ದಿರಿಸು, ವಿಭೂತಿ ಧರಿಸಿರುವ ಚಿತ್ರ ಬಳಸಲಾಗಿತ್ತು. ತಮಿಳುನಾಡು ಸರ್ಕಾರ, ಕವಿಯು ಶ್ವೇತವರ್ಣದ ವಸ್ತ್ರ ಧರಿಸಿರುವಂತಹ ಚಿತ್ರ ಬಳಸಲಿದೆ.

ಬಿಜೆಪಿಯು ಮೊದಲ ಬಾರಿಗೆ ಕವಿಯು ಕೇಸರಿ ದಿರಿಸು ಧರಿಸಿದ್ದ ಚಿತ್ರವನ್ನು 2019ರಲ್ಲಿ ಬಳಸಿತ್ತು. ಆಗ ಸಮಾಜದ ವಿವಿಧ ಸ್ತರದಿಂದ ತೀವ್ರ ಟೀಕೆ, ಆಕ್ಷೇಪಗಳು ಕೇಳಿಬಂದಿದ್ದವು.

ರಾಜಭವನ ಮತ್ತು ಬಿಜೆಪಿಯ ಮೂಲಗಳ ಪ್ರಕಾರ, ದ್ರಾವಿಡ ಪಕ್ಷಗಳು ತಿರುವಳ್ಳುವರ್‌ ಅವರ ಜನ್ಮದಿನವನ್ನು ತಮಿಳು ಮಾಸಿಕ ‘ವೈಕಾಸಿ’ (ಮೇ ಮಧ್ಯದಿಂದ ಜೂನ್‌ ಮಧ್ಯ) ಬದಲಿಗೆ ತಾಯ್‌ ಮಾಸಿಕಕ್ಕೆ ಬದಲಿಸಿತ್ತು.

‘ಸಂಪ್ರದಾಯವನ್ನು ಸರಿಪಡಿಸುವುದರಲ್ಲಿ ತಪ್ಪೇನೂ ಇಲ್ಲ. ತಿರುವಳ್ಳುವರ್ ಅವರು ವೈಕಾಸಿ ಮಾಸದಲ್ಲಿ ಜನಿಸಿದ್ದರು. ಈ ಬಗ್ಗೆ ಯಾವುದೇ ಅನುಮಾನ ಬೇಡ. ಅವರು ಹಿಂದೂ ಸಂತರು. ಹೀಗಾಗಿ, ಅವರು ಕೇಸರಿ ದಿರಿಸಿನಲ್ಲಿ ಇರುವಂತೆ ಚಿತ್ರಿಸುವುದರಲ್ಲಿಯೂ ತಪ್ಪಿಲ್ಲ‘ ಎಂದು ಬಿಜೆಪಿ ನಾಯಕರೊಬ್ಬರು ಸಮರ್ಥಿಸಿಕೊಂಡರು.

ಶುಕ್ರವಾರ ತಿರುವಳ್ಳುವರ್‌ ಅವರ ಭಾವಚಿತ್ರಕ್ಕೆ ರಾಜ್ಯಪಾಲರು ಪುಷ್ಪನಮನ ಸಲ್ಲಿಸಿದರು. ಡಿಎಂಕೆ ಸರ್ಕಾರವು 1970ರಲ್ಲಿ ಮೊದಲಿಗೆ, ಕೆ.ಆರ್.ವೇಣುಗೋಪಾಲ ಶರ್ಮಾ ಅವರು ಚಿತ್ರಿಸಿದ್ದ ಕವಿ, ಸಂತ ತಿರುವಳ್ಳುವರ್ ಚಿತ್ರ ಪ್ರಕಟಿಸಿತ್ತು. ಆ ನಂತರ ತಿರುವಳ್ಳುವರ್ ಅವರ ದಿರಿಸಿನ ವರ್ಣವು ಚರ್ಚಾಸ್ಪ‍ದ ವಿಷಯವೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT