ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ–ಇ ಬಸ್‌ ಸೇವಾ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

₹ 57 ಸಾವಿರ ಕೋಟಿ ವೆಚ್ಚದ ಯೋಜನೆ * ಕೇಂದ್ರದ ಪಾಲು ₹ 20 ಸಾವಿರ ಕೋಟಿ
Published 16 ಆಗಸ್ಟ್ 2023, 16:42 IST
Last Updated 16 ಆಗಸ್ಟ್ 2023, 16:42 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆಯ್ದ ನಗರಗಳಲ್ಲಿ ಪರಿಸರಸ್ನೇಹಿ ಬಸ್‌ಗಳ ಸಂಚಾರ ಪ್ರೋತ್ಸಾಹಿಸುವ ‘ಪಿಎಂ–ಇ ಬಸ್‌ ಸೇವಾ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಈ ಯೋಜನೆಯಡಿ, ದೇಶದ 169 ನಗರಗಳಲ್ಲಿನ ಸಾರ್ವಜನಿಕ ಸಾರಿಗೆ ಮೂಲಕ 10 ಸಾವಿರ ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆಗೆ ಉತ್ತೇಜನ ನೀಡಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಡಿದ ಭಾಷಣ ವೇಳೆ, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನು ಘೋಷಿಸಿದ್ದರು. ಇದರ ಬೆನ್ನಲ್ಲೇ, ‘ಪಿಎಂ–ಇ ಬಸ್‌ ಸೇವಾ’ ಸೇರಿದಂತೆ ಕೆಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ‘ಸಂಘಟಿತ ಬಸ್‌ ಸೇವೆ ಹೊಂದಿರದ ನಗರಗಳಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ’ ಎಂದರು.

‘ಈ ಯೋಜನೆಯನ್ನು ₹ 57,613 ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಪೈಕಿ ಕೇಂದ್ರ ಸರ್ಕಾರದ ಪಾಲು ₹ 20 ಸಾವಿರ ಕೋಟಿ ಇರಲಿದೆ. ಇ–ಬಸ್‌ಗಳ ಕಾರ್ಯಾಚರಣೆಗೆ 10 ವರ್ಷಗಳ ಕಾಲ ನೆರವು ನೀಡಲಾಗುತ್ತದೆ’ ಎಂದು ಹೇಳಿದರು.

‘ಗ್ರೀನ್‌ ಅರ್ಬನ್ ಮೊಬಿಲಿಟಿ ಇನಿಷಿಯೇಟಿವ್ಸ್’ ಮತ್ತು ನಗರ ಸಾರಿಗೆ ಬಸ್‌ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಎಂಬ ಎರಡು ವಿಭಾಗಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯಿಂದ 45 ಸಾವಿರದಿಂದ 55 ಸಾವಿರದಷ್ಟು ನೇರ ಉದ್ಯೋಗಗಳ ಸೃಷ್ಟಿ ಸಾಧ್ಯವಾಗಲಿದೆ’ ಎಂದರು.

‘ಪಿಎಂ ವಿಶ್ವಕರ್ಮ’ಕ್ಕೆ ಅನುಮೋದನೆ: ₹ 13 ಸಾವಿರ ಕೋಟಿ ವೆಚ್ಚದ ‘ಪಿಎಂ ವಿಶ್ವಕರ್ಮ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆ ಬಳಿಕ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.

ವಿಶ್ವಕರ್ಮ ಜಯಂತಿ ದಿನವಾದ ಸೆಪ್ಟೆಂಬರ್‌ 17ರಂದು ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಮಂಗಳವಾರ ಘೋಷಿಸಿದ್ದರು. 

ರೈಲು ಮಾರ್ಗಗಳ ಸಂಖ್ಯೆ ಹೆಚ್ಚಿಸುವ ₹ 32,500 ಕೋಟಿ ವೆಚ್ಚದ 7 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ.

9 ರಾಜ್ಯಗಳ 35 ಜಿಲ್ಲೆಗಳಲ್ಲಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಗಳಿಂದ, ರೈಲುಮಾರ್ಗಗಳ ಸಾಮರ್ಥ್ಯ 2,339 ಕಿ.ಮೀ.ನಷ್ಟು ಹೆಚ್ಚಳವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

‘ಆಹಾರ ಧಾನ್ಯಗಳು, ರಸಗೊಬ್ಬರ, ಕಲ್ಲಿದ್ದಲು, ಸಿಮೆಂಟ್‌, ಹಾರುಬೂದಿ, ಕಚ್ಚಾತೈಲ, ಖಾದ್ಯತೈಲ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆಗೆ ಈ ಯೋಜನೆಗಳಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.

‘ಪಿಎಂ–ಇ ಬಸ್ ಸೇವಾ’ ಯೋಜನೆ ಪ್ರಮುಖ ಅಂಶಗಳು

* 2011ರ ಜನಗಣತಿ ಪ್ರಕಾರ 3 ಲಕ್ಷ ಹಾಗೂ ಅದಕ್ಕೂ ಅಧಿಕ ಜನಸಂಖ್ಯೆ ಇರುವ ಆಯ್ದ ನಗರಗಳಲ್ಲಿ ಯೋಜನೆ ಅನುಷ್ಠಾನ

* ಎಲ್ಲ ಕೇಂದ್ರಾಡಳಿತ ಪ್ರದೇಶಗಳು, ಈಶಾನ್ಯ ರಾಜ್ಯಗಳ ರಾಜಧಾನಿಗಳಲ್ಲಿ ಜಾರಿ

* ಬಸ್‌ಗಳ ಸೇವೆ ಒದಗಿಸುವುದು, ಬಸ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಹಣ ಪಾವತಿ ಜವಾಬ್ದಾರಿ ಆಯಾ ರಾಜ್ಯಗಳು/ನಗರಗಳದ್ದು

* ಉದ್ದೇಶಿತ ಯೋಜನೆಯಡಿ ನಿಗದಿಪಡಿಸಿದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT