ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ ಹಿಂಸಾಚಾರ| ಲಜ್ಜೆಗೆಟ್ಟ ‘ಮೌನ’: ‘ಇಂಡಿಯಾ’ ಆಕ್ರೋಶ

ಮಣಿಪುರ: ಸಂಸದರ ನಿಯೋಗದಿಂದ ರಾಜ್ಯಪಾಲರ ಭೇಟಿ, ಮನವಿ ಪತ್ರ ಸಲ್ಲಿಕೆ
Published 30 ಜುಲೈ 2023, 23:30 IST
Last Updated 30 ಜುಲೈ 2023, 23:30 IST
ಅಕ್ಷರ ಗಾತ್ರ

ಇಂಫಾಲ್ : ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಳೆದಿರುವ ‘ಮೌನ’ವು ಲಜ್ಜೆಗೆಟ್ಟ ಉದಾಸೀನತೆಗೆ ಸಾಕ್ಷಿಯಾಗಿದೆ ಎಂದು ‘ಇಂಡಿಯಾ’ ಸಂಸದರ ನಿಯೋಗ ಆಪಾದಿಸಿದೆ.

ಪ್ರಧಾನಿ ಅವರ ನಿರ್ಲಕ್ಷ್ಯವು ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಕೋಪ ಉಲ್ಬಣ ಹಾಗೂ ಪರಕೀಯ ಭಾವನೆ ಮೂಡಲು ಕಾರಣವಾಗಿದೆ. ವಿಳಂಬ ಮಾಡದೆ ಶಾಂತಿ ಕಾಪಾಡುವಂತೆ ಮೋದಿ ಅವರು, ನಾಗರಿಕರಿಗೆ ಮನವಿ ಮಾಡಬೇಕಿದೆ ಎಂದು ಒತ್ತಾಯಿಸಿದೆ. 

ಸಂಘರ್ಷದಿಂದ ನಲುಗಿರುವ ಕಣಿವೆ ರಾಜ್ಯದ ವಸ್ತುಸ್ಥಿತಿಯ ಅವಲೋಕನಕ್ಕೆ ತೆರಳಿ‌ದ್ದ ನಿಯೋಗವು, ಭಾನುವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವು ಆಲಿಸಿತು. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರೊಟ್ಟಿಗೆ ಸದ್ಯದ ಸ್ಥಿತಿಗತಿ ಹಾಗೂ ಆಡಳಿತ ಯಂತ್ರದ ವೈಫಲ್ಯ ಕುರಿತು ಚರ್ಚಿಸಿತು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಶಾಂತಿ ಪುನರ್‌ ಸ್ಥಾಪನೆ ಮತ್ತು ಪರಿಸ್ಥಿತಿಯು ಸಹಜತೆಗೆ ಮರಳಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸ‌ಬೇಕಿದೆ. ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದು ರಾಜ್ಯಪಾಲರಿಗೆ, ನಿಯೋಗವು ಕೋರಿತು. 

ಸಂಘರ್ಷದಿಂದ ಎರಡೂ ಸಮುದಾಯಗಳ ಬದುಕಿನ ಬಂಡಿ ಹಳಿ ತಪ್ಪಿರುವುದನ್ನು ಈ ವೇಳೆ ಮನವರಿಕೆ ಮಾಡಿಕೊಟ್ಟಿತು. ಪರಿಹಾರ ಶಿಬಿರಗಳ ಶೋಚನೀಯ ಸ್ಥಿತಿ ಬಗ್ಗೆಯೂ ಗಮನ ಸೆಳೆಯಿತು. ಅಲ್ಲಿರುವ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮವಹಿಸಬೇಕಿದೆ ಎಂದು ಮನವಿ ಮಾಡಿತು.

ವಿದ್ಯಾರ್ಥಿಗಳ ಭವಿಷ್ಯವೂ ಅನಿಶ್ಚಿತವಾಗಿದ್ದು, ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ನೆರವು ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದ ನಿಯೋಗವು, ಮನವಿ ಪತ್ರ ಸಲ್ಲಿಸಿತು.‌

ಪತ್ರದಲ್ಲಿ ಏನಿದೆ?:

ಜನರ ಜೀವಹಾನಿ ತಡೆ ಹಾಗೂ ಆಸ್ತಿ ರಕ್ಷಣೆಯಲ್ಲಿ ಡಬ್ಬಲ್‌ ಎಂಜಿನ್‌ ಸರ್ಕಾರದ  ವೈಫಲ್ಯ ಕುರಿತು ಪತ್ರದಲ್ಲಿ ದೂರಲಾಗಿದೆ. 

ಸಂಘರ್ಷ ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕೂಡಲೇ ಶಾಂತಿ ಮತ್ತು ಸಾಮರಸ್ಯ ಮೂಡಿಸಲು ಅಗತ್ಯ ಕ್ರಮವಹಿಸಬೇಕು. ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದೆ.

ಮತ್ತೆ ಗುಂಡಿನ ದಾಳಿ ಮತ್ತು ಮನೆಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ಹೆಚ್ಚಿವೆ. ಸಂಘರ್ಷ ಆರಂಭವಾಗಿ ಮೂರು ತಿಂಗಳು ಉರುಳಿದರೂ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿಲ್ಲ. ಇದು ಆಡಳಿತ ಯಂತ್ರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ ಎಂದು ಟೀಕಿಸಿದೆ.

ಇಂಟರ್‌ನೆಟ್‌ ಸೇವೆಗೆ ನಿರ್ಬಂಧ ಹೇರಿರುವುದು ವದಂತಿ ಹಬ್ಬಲು ಕಾರಣವಾಗಿದೆ. ಜೊತೆಗೆ, ಎರಡೂ ಸಮುದಾಯಗಳ ನಡುವೆ ಅಪನಂಬಿಕೆ ಮೂಡಲು ನೀರೆರೆದಿದೆ. ಸಾಮರಸ್ಯ ಹಾಗೂ ಶಾಂತಿಯ ಪುನರ್ ಸ್ಥಾಪನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದೆ. 

ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ನೇತೃತ್ವದ ನಿಯೋಗದಲ್ಲಿ ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಾಝಿ, ಡಿಎಂಕೆಯ ಕನಿಮೊಳಿ ಕರುಣಾನಿಧಿ, ಎನ್‌ಸಿಪಿಯ ಪಿ.ಪಿ. ಮೊಹಮ್ಮದ್‌ ಫೈಜಲ್‌ ಸೇರಿದಂತೆ 21 ಸಂಸದರು ಇದ್ದರು.

ಮನ್‌ ಕಿ ಬಾತ್‌ನಲ್ಲಿ ತನ್ನದೆ ಧ್ವನಿ ಆಲಿಸುವುದೆಂದರೆ ಮೋದಿಗೆ ಖುಷಿ. ಅದನ್ನು ಕೋಟ್ಯಂತರ ಜನರಿಗೆ ಕೇಳಿಸುವುದರಲ್ಲೂ ಆಸಕ್ತರಾಗಿದ್ದಾರೆ. ಆದರೆ ಮಣಿಪುರ ಜನರ ನೋವು ಮಾತ್ರ ಅವರಿಗೆ ಕೇಳುತ್ತಿಲ್ಲ ಜೈರಾಮ್ ರಮೇಶ್‌ ಪ್ರಧಾನ ಕಾರ್ಯದರ್ಶಿ ಎಐಸಿಸಿ  
ಜೈರಾಮ್ ರಮೇಶ್‌, ಪ್ರಧಾನ ಕಾರ್ಯದರ್ಶಿ ಎಐಸಿಸಿ

ಸಂಜಯ್‌ ರಾವುತ್‌ ವಾಗ್ದಾಳಿಮುಂಬೈ (ಪಿಟಿಐ): ಹಿಂಸಾಚಾರಪೀಡಿತ ಮಣಿಪುರಕ್ಕೆ ಭೇಟಿ ನೀಡಿದ ‘ಇಂಡಿಯಾ’ ನಿಯೋಗವನ್ನು ಟೀಕಿಸಿದ ಬಿಜೆಪಿ ವಿರುದ್ಧ ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ವಾಗ್ದಾಳಿ ನಡೆಸಿದ್ದಾರೆ. ‌‌ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ತೋರಿಕೆಗಾಗಿ ನಿಯೋಗ ಭೇಟಿ ನೀಡಿದೆಯೆಂದು ಕಮಲ ಪಾಳಯ ದೂರಿರುವುದು ಅರ್ಥಹೀನ. ಸಂಘರ್ಷ ಸಂಬಂಧ ಪ್ರಧಾನಿ ಮೋದಿ ಮೊದಲು ‘ಮೌನ’ ಮುರಿಯಬೇಕು ಅಥವಾ ಸಂಸತ್‌ನಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು. ಮಣಿಪುರ ಕೂಡ ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿರುವವರೂ ಭಾರತೀಯರಾಗಿದ್ದಾರೆ. ಸಂತ್ರಸ್ತರ ನೋವು ಆಲಿಸುವುದು ಪ್ರಧಾನಿಯ ಕರ್ತವ್ಯ. ಅವರು ಹೋಗದೇ ಇದ್ದುದಕ್ಕೆ ನಿಯೋಗ ಭೇಟಿ ನೀಡಿದೆ. ಇದನ್ನೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದರು. ನಿಯೋಗದ ಸದಸ್ಯರು ಸಂತ್ರಸ್ತರನ್ನು ಭೇಟಿ ಮಾಡಿ ಅವರ ನೋವು ಆಲಿಸಿದ್ದಾರೆ. ಇದನ್ನು ಟೀಕಿಸುವ ಕ್ರೂರ ಸರ್ಕಾರ ಹಾಗೂ ರಾಜಕೀಯವನ್ನು ನಾವು ಹಿಂದೆಂದೂ ಕಂಡಿಲ್ಲ ಎಂದು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT