ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ಬಗ್ಗೆ ಸರ್ಕಾರ ಚಿಂತಿಸಲಿ: ಸಂಸದೀಯ ಸಮಿತಿ ಸಲಹೆ

Published 28 ನವೆಂಬರ್ 2023, 14:18 IST
Last Updated 28 ನವೆಂಬರ್ 2023, 14:18 IST
ಅಕ್ಷರ ಗಾತ್ರ

ನವದೆಹಲಿ: ಕೆಲವೊಮ್ಮೆ ರೋಗಿಗಳ ಸಂಬಂಧಿಕರು, ಪರಿಚಾರಕರಿಂದ ಹಲ್ಲೆಗೊಳಗಾಗುವ ಆರೋಗ್ಯ ಕಾರ್ಯಕರ್ತರಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.

ಬಿಜೆಪಿಯ ಬ್ರಿಜ್‌ ಲಾಲ್ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಪ್ರಸ್ತಾಪಿತ ಮೂರು ಕ್ರಿಮಿನಲ್‌ ಕಾನೂನುಗಳು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ನ್ಯಾಯ ಸಂಹಿತೆಯ 115ನೇ ಸೆಕ್ಷನ್‌ ಅಡಿಯಲ್ಲಿ ಅವಕಾಶ ನೀಡಬೇಕು ಎಂದು ಹಲವಾರು ವೈದ್ಯಕೀಯ ಸಂಘಟನೆಗಳು ಸಲ್ಲಿಸಿರುವ ಮನವಿಯನ್ನು ಪರಾಮರ್ಶೆ ನಡೆಸುತ್ತಿದೆ. 

‘ಸಮಿತಿಗೆ ವೈದ್ಯಕೀಯ ಸಂಘಟನೆಗಳು ಸಲ್ಲಿಸಿರುವ ಮನವಿಯಲ್ಲಿ, ಚಿಕಿತ್ಸೆ ಸಂದರ್ಭದಲ್ಲಿ ರೋಗಿ ಮೃತಪಟ್ಟರೆ ಸಂಬಂಧಿಕರು ಆರೋಗ್ಯ ಕಾರ್ಯಕರ್ತರ ವಿರುದ್ಧ ಹಿಂಸಾಚಾರಕ್ಕೆ ಮುಂದಾಗುತ್ತಾರೆ. ಬೇರೆಲ್ಲ ವೃತ್ತಿಗಿಂತ ವೈದ್ಯ ವೃತ್ತಿಯಲ್ಲಿ ಈ ಅಪಾಯ ಹೆಚ್ಚಿದೆ. ಇಂಥ ಆಕ್ರಮಣಗಳು ದೇಶದಾದ್ಯಂತ ಚಾಲ್ತಿಯಲ್ಲಿವೆ. ಹೀಗಾಗಿ ಆರೋಗ್ಯ ಕಾರ್ಯಕರ್ತರ ಅನುಕೂಲಕ್ಕಾಗಿ ಕಾನೂನಾತ್ಮಕ ರಕ್ಷಣೆ ಒದಗಿಸಬೇಕಾದ ಅಗತ್ಯವಿರುವುದಾಗಿ ಹೇಳಿವೆ’ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವಾಲಯವು, ‘ಜಾರಿಯಲ್ಲಿರುವ ಕಾನೂನುಗಳು ಎಲ್ಲರಿಗೂ ಅನ್ವಯವಾಗುತ್ತವೆ. ಕಾನೂನಿನ ಕಣ್ಣಿಗೆ ಎಲ್ಲರೂ ಸಮಾನರು’ ಎಂದು ಸ್ಪಷ್ಟಪಡಿಸಿದೆ.

ವೈದ್ಯರು, ಪತ್ರಕರ್ತರು, ವಕೀಲರು ಸೇರಿದಂತೆ ಎಲ್ಲಾ ನಾಗರಿಕರ ರಕ್ಷಣೆ  ದೇಶದ ಜವಾಬ್ದಾರಿ. ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿಗೆ ವಿಶೇಷ ಕಾನೂನು ಜಾರಿ ಮಾಡಿದಲ್ಲಿ, ಇತರರೂ ಸಹ ಅದನ್ನೇ ಕೇಳುತ್ತಾರೆ ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು  ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ‘ವೈದ್ಯಕೀಯ ವೃತ್ತಿಪರರ ಕಾಯ್ದೆ’ ಜಾರಿ ಬಗ್ಗೆ ಪ್ರಸ್ತಾಪಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದೂ ಮಾಹಿತಿ ನೀಡಿತು.

ಬಳಿಕ ಸಮಿತಿಯು,‘ಆರೋಗ್ಯ ಕಾರ್ಯಕರ್ತರಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT