ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೈವ್‌ಗೆ ಬಾಲ್ಯದ ಬೆತ್ತಲೆ ಚಿತ್ರ ಸೇರಿಸಿದ ಟೆಕಿ; ಖಾತೆ ತಡೆಹಿಡಿದ ಗೂಗಲ್!

Published 18 ಮಾರ್ಚ್ 2024, 16:07 IST
Last Updated 18 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಅಹಮದಾಬಾದ್: ಬಾಲ್ಯದಲ್ಲಿ ಇದ್ದಾಗ ತೆಗೆದ ಬೆತ್ತಲೆ ಚಿತ್ರವೊಂದನ್ನು ಗೂಗಲ್‌ ಡ್ರೈವ್‌ಗೆ ಸೇರಿಸಿದ್ದಕ್ಕಾಗಿ ತಡೆಹಿಡಿಯಲಾಗಿದ್ದ ನೀಲ್ ಶುಕ್ಲಾ ಎಂಬುವವರ ಜಿಮೇಲ್ ಖಾತೆಯ ಸೇವೆಯನ್ನು ಮರಳಿ ಪಡೆಯಲು ಕೋರಿದ ಅರ್ಜಿಯು ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನೋಟಿಸ್‌ ಜಾರಿಗೆ ಆದೇಶಿಸಿದೆ. ಶುಕ್ಲಾ ಅವರು ತಾವು ಎರಡು ವರ್ಷ ವಯಸ್ಸಿನ ಬಾಲಕ ಆಗಿದ್ದಾಗ ತಮ್ಮ ಅಜ್ಜಿಯ ಕೈಯಿಂದ ಸ್ನಾನ ಮಾಡಿಸಿಕೊಂಡಿದ್ದರು. ಆ ಚಿತ್ರವನ್ನು ಅವರು ಗೂಗಲ್ ಡ್ರೈವ್‌ಗೆ ಸೇರಿಸಿದ್ದರು. ಶುಕ್ಲಾ ಅವರು ‘ಮಕ್ಕಳ ಮೇಲಿನ ದೌರ್ಜನ್ಯದ’ ಚಿತ್ರವನ್ನು ಡ್ರೈವ್‌ಗೆ ಸೇರಿಸಿದ್ದಾರೆ ಎಂದು ಗೂಗಲ್ ಕಂಪನಿಯು ಅವರ ಜಿಮೇಲ್ ಖಾತೆಯನ್ನು ತಡೆಹಿಡಿದಿದೆ.

ನ್ಯಾಯಮೂರ್ತಿ ವೈಭವಿ ಡಿ. ನಾನಾವತಿ ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಕೂಡ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ. ಶುಕ್ಲಾ ಅವರು ಕಂಪ್ಯೂಟರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಶುಕ್ಲಾ ಅವರು ಬಾಲ್ಯದ ಚಿತ್ರಗಳನ್ನು ಡ್ರೈವ್‌ಗೆ ಸೇರಿಸಿದ್ದರು. ಅದರಲ್ಲಿ ತಮ್ಮ ಅಜ್ಜಿ ತಮಗೆ ಸ್ನಾನ ಮಾಡಿಸಿದ್ದ ಬಾಲ್ಯದ ಚಿತ್ರ ಕೂಡ ಒಂದಾಗಿತ್ತು. ‘ಮಕ್ಕಳ ಮೇಲಿನ ದೌರ್ಜನ್ಯದ’ ಚಿತ್ರವನ್ನು ಸೇರಿಸಲಾಗಿದೆ ಎಂದು ಕಂಪನಿಯು ಕಳೆದ ವರ್ಷದ ಏಪ್ರಿಲ್‌ನಲ್ಲಿ ಶುಕ್ಲಾ ಅವರ ಖಾತೆಯನ್ನು ತಡೆಹಿಡಿದಿದೆ ಎಂದು ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

ಇಮೇಲ್ ಖಾತೆಯನ್ನು ಗೂಗಲ್‌ ತಡೆಹಿಡಿದಿರುವ ಕಾರಣ ಶುಕ್ಲಾ ಅವರಿಗೆ ತಮಗೆ ಬರುವ ಇಮೇಲ್‌ಗಳನ್ನು ಪರಿಶೀಲಿಸಲು ಆಗುತ್ತಿಲ್ಲ. ಇದರಿಂದಾಗಿ ಅವರ ವಹಿವಾಟಿಗೆ ನಷ್ಟ ಆಗಿದೆ ಎಂದು ಶುಕ್ಲಾ ಪರ ವಕೀಲರು ದೂರಿದ್ದಾರೆ.

ಶುಕ್ಲಾ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಗುಜರಾತ್ ಪೊಲೀಸರು ಹಾಗೂ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಾಗಿಲು ತಟ್ಟಿದ್ದರು. ಆದರೆ ಅಲ್ಲಿ ಕೂಡ ಸಮಸ್ಯೆಗೆ ಪರಿಹಾರ ಸಿಗಲಿಲ್ಲ.

ಖಾತೆಯನ್ನು ತಡೆಹಿಡಿದ ಒಂದು ವರ್ಷದ ನಂತರ ಆ ಖಾತೆಯಲ್ಲಿ ಇರುವ ಎಲ್ಲ ಮಾಹಿತಿಯನ್ನು ಅಳಿಸಲಾಗುತ್ತದೆ. ಅಂದರೆ, ಈ ವರ್ಷದ ಏಪ್ರಿಲ್‌ನಲ್ಲಿ ಗೂಗಲ್ ಕಂಪನಿಯು ತಮ್ಮ ಖಾತೆಯಲ್ಲಿನ ಮಾಹಿತಿಯನ್ನು ಅಳಿಸಿಹಾಕಲಿದೆ. ಹೀಗಾಗಿ ತಮ್ಮ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಶುಕ್ಲಾ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT