ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ

Published 25 ಏಪ್ರಿಲ್ 2024, 13:46 IST
Last Updated 25 ಏಪ್ರಿಲ್ 2024, 13:46 IST
ಅಕ್ಷರ ಗಾತ್ರ

ಅಹ್ಮದಾಬಾದ್: ಗುಜರಾತ್‌ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಕಳೆದ ಜ. 18ರಂದು ವಡೋದರಾದಲ್ಲಿ ದೋಣಿ ಮಗುಚಿದ ದುರಂತದಲ್ಲಿ 12 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದರು. ಘಟನೆ ಕುರಿತು ಸ್ವಯಂ ಪ್ರೇರಿತ ದೂರನ್ನು ಹೈಕೋರ್ಟ್ ದಾಖಲಿಸಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾ. ಅನಿರುದ್ಧ ಪಿ. ಮಯೀ ಅವರಿದ್ದ ವಿಭಾಗೀಯ ಪೀಠವು, ವಡೋದರಾ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಮತ್ತು 2 ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಗುಜರಾತ್ ನಗರಾಭಿವೃದ್ಧಿ ಹಾಗೂ ನಗರ ಗೃಹ ನಿರ್ಮಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

‘ಇದಕ್ಕೆ ಕಾರಣರಾಗಿರಬಹುದಾದ ಇತರ ಅಧಿಕಾರಿಗಳ ಪಾತ್ರ ಮತ್ತು ಹೊಣೆ ಕುರಿತೂ ತನಿಖಾಧಿಕಾರಿ ಗಮನಿಸಿ, ದಾಖಲಿಸಬೇಕು. ಕೋಟಿಯಾ ಪ್ರಾಜೆಕ್ಟ್ಸ್‌ಗೆ ಗುತ್ತಿಗೆ ನೀಡುವ ಮೊದಲು, ಪರಿಗಣಿಸಬೇಕಾದ ಕೆಲವೊಂದು ಮಾನದಂಡಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಕೋಟಿಯಾ ಪ್ರಾಜೆಕ್ಟ್ಸ್‌ಗೆ ಗುತ್ತಿಗೆ ನೀಡುವ ಮೊದಲು ಆಗಿನ ಪಾಲಿಕೆ ಆಯುಕ್ತರು, ಎಲ್ಲಾ ಮಾನದಂಡಗಳನ್ನೂ ಉಲ್ಲಂಘಿಸಿ, ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಘಟನೆ ನಂತರ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಪ್ರಕಾರ ಇದು ಸ್ಪಷ್ಟವಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

‘2015ರಲ್ಲಿ ಗುತ್ತಿಗೆ ಪಡೆಯಲು ಅನರ್ಹವಾದ ಕೋಟಿಯಾ ಪ್ರಾಜೆಕ್ಟ್ಸ್‌, ಕೇವಲ 2 ತಿಂಗಳ ಅವಧಿಯಲ್ಲಿ ಗುತ್ತಿಗೆ ಪಡೆದಿದ್ದು ಹೇಗೆ’ ಎಂಬುದು ಸಂಶಯಾಸ್ಪದವಾಗಿದೆ. ಈ ಕುರಿತು ವಿವರವಾದ ತನಿಖೆ ನಡೆಯಬೇಕಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT