ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 376 ಕೋಟಿ ಮೌಲ್ಯದ ಹೆರಾಯಿನ್‌ ವಶಕ್ಕೆ

ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಮಾದಕವಸ್ತು ಪತ್ತೆ
Last Updated 12 ಜುಲೈ 2022, 19:31 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ಭಯೋತ್ಪಾದನೆ ತಡೆ ಘಟಕವು (ಎಟಿಎಸ್‌) ₹376 ಕೋಟಿ ಮೌಲ್ಯದ 75 ಕೆ.ಜಿ.ಗೂ ಹೆಚ್ಚು ಹೆರಾಯಿನ್‌ ಅನ್ನು ಮುಂದ್ರಾ ಬಂದರಿನಲ್ಲಿದ್ದ ಕಂಟೇನರ್‌ ಒಂದರಿಂದ ಮಂಗಳವಾರ ವಶಕ್ಕೆ ಪಡೆದಿದೆ. ಎರಡು ತಿಂಗಳ ಹಿಂದೆಯೇ ಈ ಕಂಟೇನರ್ ಬಂದರು ತಲುಪಿತ್ತು. ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಎಇ) ಬಂದ ಈ ಕಂಟೇನರ್‌ ಅನ್ನು ಪಂಜಾಬ್‌ಗೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನಾಸ್ಪದವಾದ ಕಂಟೇನರ್ ಒಂದು ಮುಂದ್ರಾ ಬಂದರಿನಲ್ಲಿ ಸುಮಾರು ಎರಡು ತಿಂಗಳುಗಳಿಂದ ಇದೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಎಟಿಎಸ್‌, ಹೆರಾಯಿನ್‌ ವಶಕ್ಕೆ ಪಡೆದಿದೆ. ಕಂಟೇನರ್‌ನಲ್ಲಿ 4,000 ಕೆ.ಜಿ. ಬಟ್ಟೆ ಇತ್ತು. 450 ಸುರುಳಿಗಳಾಗಿ ಈ ಬಟ್ಟೆಯನ್ನು ಸುತ್ತಲಾಗಿತ್ತು. ಇವುಗಳ ಪೈಕಿ 64 ಸುರುಳಿಗಳ ಒಳಗೆ ಅತ್ಯುತ್ತಮ ಗುಣಮಟ್ಟದ ಹೆರಾಯಿನ್‌ ಅನ್ನು ಅಡಗಿಸಿ ಇರಿಸಲಾಗಿತ್ತು. ಎಕ್ಸ್‌ರೇ ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗುವುದನ್ನು ತಡೆಯುವುದಕ್ಕೆ ನೀಲಿ ಸೆಲ್ಲೋ ಟೇಪ್‌ನಲ್ಲಿ ಹೆರಾಯಿನ್‌ ಅನ್ನು ಸುತ್ತಿ ಇರಿಸಲಾಗಿತ್ತು.

ಕಾರ್ಯಾಚರಣೆಯಲ್ಲಿ ಪಂಜಾಬ್‌ ಪೊಲೀಸರೂ ಭಾಗಿಯಾಗಿದ್ದರು.

ಯುಎಇಯ ಅಜ್ಮಾನ್‌ನಲ್ಲಿರುವ ಗ್ರೀನ್‌ ಫಾರೆಸ್ಟ್‌ ಜನರಲ್‌ ಟ್ರೇಡಿಂಗ್‌ ಎಂಬ ಕಂಪನಿಯಿಂದ ಈ ಕಂಟೇನರ್ ಅನ್ನು ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆದಿದೆ. ಪಶ್ಚಿಮ ಬಂಗಾಳದ ಗಾಂಧಿಧಾಮ್‌ ಎಂಬ ಸಂಸ್ಥೆಯ ಕಚ್‌ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಏಜೆಂಟ್‌ ಒಬ್ಬನನ್ನು ಗುರುತಿಸಲಾಗಿದೆ.

ಬಂದರಿನಲ್ಲಿಯೇ ಹೆರಾಯಿನ್‌ ಕಂಟೇನರ್ ಅನ್ನು ಬಿಟ್ಟು ಹೋದ ಎರಡನೇ ಪ್ರಕರಣ ಇದು ಎಂದು ಎಟಿಎಸ್‌ ಹೇಳಿದೆ. ‘ಸಿಕ್ಕಿ ಬೀಳದ ರೀತಿಯಲ್ಲಿ ಒಯ್ಯುವ ಉದ್ದೇಶದಿಂದಲೇಕಂಟೇನರ್‌ ಅನ್ನು ಬಂದರಿನಲ್ಲಿ ಬಿಟ್ಟಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಖಚಿತವಾಗಿ ಏನನ್ನೂ ಹೇಳಲಾಗದು’ ಎಂದು ಉಪ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಪಿ. ರೊಜಿಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT