ಚಂಡೀಗಢ: ಹಿಂಸಾಚಾರ ನಡೆದಿದ್ದ ಹರಿಯಾಣದ ನೂಹ್‌ನಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಈ ವಿಚಾರವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿ.ಎಸ್. ಸಂಧ್‌ವಾಲಿಯಾ ಅವರು, ಜಿಲ್ಲಾಡಳಿತವು ನಡೆಸುತ್ತಿರುವ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ತಡೆಹಿಡಿಯುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಈಚೆಗೆ ಹಮ್ಮಿಕೊಂಡಿದ್ದ ಮೆರವಣಿಗೆಯ ವೇಳೆ ಗಲಭೆಕೋರರು ಕಲ್ಲುತೂರಾಟ ನಡೆಸಲು ಈ ಅಕ್ರಮ ಕಟ್ಟಡಗಳನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.
ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನೂಹ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಸೇರಿದಂತೆ ಆರು ಮಂದಿ ಈ ಗಲಭೆಯಲ್ಲಿ ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.