ಚಂಡೀಗಢ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಹರಿಯಾಣದ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಸುಖವೀಂದರ್ ಮಂಡಿ ಹಾಗೂ ಒಬಿಸಿ ಮೋರ್ಚಾದ ಅಧ್ಯಕ್ಷ ಕರಣ್ ದೇವ್ ಕಂಬೋಜ್ ಅವರು ಕಾಂಗ್ರೆಸ್ ಸೇರಿದ್ದಾರೆ.
ಬಾಧರಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಡಿ ಅವರನ್ನು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಹಾಗೂ ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನ್ ಅವರು ಪಕ್ಷಕ್ಕೆ ಶನಿವಾರ ಬರಮಾಡಿಕೊಂಡರು.
ಮಂಡಿ ಅವರು ಬಾಧರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಇವರಿಗೆ ಟಿಕೆಟ್ ನಿರಾಕರಿಸಿತ್ತು.
ರಾಜ್ಯದ ಬಿಜೆಪಿಯ ಮತ್ತೊಬ್ಬ ಮುಖಂಡ ಕರಣ್ ದೇವ್ ಕಂಬೋಜ್ ಅವರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡರು. ಮಾಜಿ ಸಚಿವರಾಗಿದ್ದ ಇವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಹೀಗಾಗಿ ಇವರು ಇತ್ತೀಚೆಗೆ ಹುದ್ದೆಯಿಂದ ಕೆಳಗಿಳಿದಿದ್ದರು.
‘ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದವರನ್ನು ಕಡೆಗಣಿಸಿರುವ ಬಿಜೆಪಿ, ಹಲವು ಹೊಸ ಮುಖಗಳು ಹಾಗೂ ಪಕ್ಷಾಂತರಿಗಳಿಗೆ ಮಣೆ ಹಾಕಿದೆ’ ಎಂದು ಕಂಬೋಜ್ ಆರೋಪಿಸಿದ್ದಾರೆ.
ಹರಿಯಾಣ ವಿಧಾನಸಭೆಯ 90 ಸೀಟುಗಳಿಗೆ ಅ. 5ರಂದು ಮತದಾನ ನಡೆಯಲಿದೆ. ಮತ ಎಣಿಕೆ ಅ. 8ರಂದು ನಡೆಯಲಿದೆ.