ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ | 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ; ಭೀವಾನಿ ಕ್ಷೇತ್ರ ಸಿಪಿಎಂಗೆ

ಕೊನೇ ಕ್ಷಣದಲ್ಲಿ ಪಟ್ಟಿ ಬಿಡುಗಡೆ
Published : 12 ಸೆಪ್ಟೆಂಬರ್ 2024, 10:00 IST
Last Updated : 12 ಸೆಪ್ಟೆಂಬರ್ 2024, 10:00 IST
ಫಾಲೋ ಮಾಡಿ
Comments

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಗುರುವಾರ ಮುಕ್ತಾಯಗೊಂಡಿದ್ದು, ಒಂದು ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟು ಉಳಿದ 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭೀವಾನಿ ಕ್ಷೇತ್ರವನ್ನು ಸಿಪಿಎಂಗೆ ಬಿಟ್ಟುಕೊಟ್ಟಿದೆ. 

ಸಂಸದ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರನ್ನು ಕೈಥಲ್‌ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಕಾಂಗ್ರೆಸ್‌, ಬುಧವಾರ ರಾತ್ರಿ 11.30ರ ಬಳಿಕ 48 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, 40 ಅಭ್ಯರ್ಥಿಗಳ ಹೆಸರು ಪ್ರಕಟಿಸಿತು. ತಡರಾತ್ರಿ ಐದು ಅಭ್ಯರ್ಥಿಗಳು ಮತ್ತು ಗುರುವಾರ ಬೆಳಿಗ್ಗೆ 10.42ಕ್ಕೆ ಇಬ್ಬರು ಹಾಗೂ ಮಧ್ಯಾಹ್ನ 2.05 ನಿಮಿಷಕ್ಕೆ ಒಬ್ಬರ ಹೆಸರನ್ನು ಘೋಷಿಸಿತು.

ಸಿಪಿಎಂನೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿದ್ದ ಕಾರಣ ನಾಮಪತ್ರ ಸಲ್ಲಿಕೆಯ ಕೊನೇ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ಸೀಟು ಹಂಚಿಕೆ ವಿಚಾರದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಪಿಎಂ ಕೇಳಿದ್ದ ಯಾವುದೇ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ಧವಿರಲಿಲ್ಲ. ಹೀಗಾಗಿ ಬಿಕ್ಕಟ್ಟು ಉಂಟಾಗಿ ಸಿಪಿಎಂ ಐದು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಾಮಪತ್ರ ಹಿಂಪಡೆಯುವ ದಿನವಾದ ಸೆಪ್ಟಂಬರ್‌ 16ರ ಒಳಗಾಗಿ  ಬಿಕ್ಕಟ್ಟು ಶಮನವಾಗಬಹುದೆಂದು ಅದು ಭಾವಿಸಿದೆ. ಈ ಮಧ್ಯೆ ಭೀವಾನಿ ಕ್ಷೇತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿವೆ.

ಭೀವಾನಿ ಕ್ಷೇತ್ರವು ಸಿಪಿಎಂನ ಭದ್ರಕೋಟೆಯಾಗಿದ್ದು, ರೈತರ ಪ್ರತಿಭಟನೆ ವೇಳೆ ಸಿಪಿಎಂ ಕಾರ್ಯಕರ್ತರು ಸಕ್ರಿಯರಾಗಿದ್ದರು.

ಕಾಂಗ್ರೆಸ್‌ನ ಈ ನಡೆಯು ಇತರೆ ಕ್ಷೇತ್ರಗಳಲ್ಲಿ ಸಿಪಿಎಂ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎಂದು ನಾಯಕರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಮಾತುಕತೆಗೆ ಸಿಪಿಎಂ ನಾಯಕರು, ಹರಿಯಾಣ ಕಾಂಗ್ರೆಸ್‌ನ ಪ್ರಮುಖ ನಾಯಕ ಭೂಪೇಂದರ್‌ ಹೂಡಾ ಅವರನ್ನು ಸಂಪರ್ಕಿಸಿದ್ದರು. ಆದರೆ ಹೂಡಾ ಅವರು ಚೆಂಡನ್ನು ಹೈಕಮಾಂಡ್‌ ಅಂಗಳಕ್ಕೆ ಎಸೆದಿದ್ದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೈತ್ರಿಗೆ ಒಪ್ಪಿಗೆ ನೀಡಿದ ನಂತರವಷ್ಟೇ ಮಾತುಕತೆ ಆರಂಭವಾಗಿತ್ತು.

ನಾಮಪತ್ರ ಸಲ್ಲಿಸಿದ ಆದಿತ್ಯ ಸುರ್ಜೇವಾಲಾ, ಶ್ರುತಿ ಚೌದರಿ:

ಚಂಡೀಗಢ: ರಣದೀಪ್‌ ಸಿಂಗ್‌ ಸುರ್ಜೇವಾಲಾ ಪುತ್ರ ಆದಿತ್ಯ ಸುರ್ಜೇವಾಲಾ ಮತ್ತು  ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್‌ ಅವರ ಮೊಮ್ಮಗಳು, ಬಿಜೆಪಿ ಅಭ್ಯರ್ಥಿ ಶ್ರುತಿ ಚೌದರಿ ಸೇರಿದಂತೆ ಹಲವು ನಾಯಕು ಗುರುವಾರ ನಾಮಪತ್ರ ಸಲ್ಲಿಸಿದರು.

ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ಅಭ್ಯರ್ಥಿ ಚಂದ್ರ ಮೋಹನ್‌ ಅವರು ಪಂಚಕುಲಾದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು.

90 ಸದಸ್ಯಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್‌ 8ರಂದು ಮತ ಎಣಿಕೆ ನಡೆಯಲಿದೆ.

ಮತ್ತೆ 19 ಅಭ್ಯರ್ಥಿಗಳನ್ನು ಘೋಷಿಸಿದ ಎಎಪಿ

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ 19 ಅಭ್ಯರ್ಥಿಗಳನ್ನು ಒಳಗೊಂಡ ಮತ್ತೊಂದು ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಗುರುವಾರ ಬಿಡುಗಡೆ ಮಾಡಿದೆ. ಪಕ್ಷದ ಹಿರಿಯ ನಾಯಕ ಪ್ರೇಮ್‌ ಗರ್ಗ್‌ ಅವರನ್ನು ಪಂಚಕುಲಾದಿಂದ ಕಣಕ್ಕಿಳಿಸಿದೆ. ಎಲನಾಬಾದ್‌ ಕ್ಷೇತ್ರದಲ್ಲಿ ಇಂಡಿಯನ್‌ ನ್ಯಾಷನಲ್‌ ಲೋಕದಳದ ಅಭ್ಯರ್ಥಿ ಅಭಯ್‌ ಸಿಂಗ್‌ ಚೌಟಾಲಾ ಅವರ ವಿರುದ್ಧ ಮನೀಶ್ ಅರೋರಾ ಅವರನ್ನು ಕಣಕ್ಕಿಳಿಸಿದೆ. 70 ಅಭ್ಯರ್ಥಿಗಳ ಹೆಸರನ್ನು ಪಕ್ಷವು ಈಗಾಗಲೇ ಘೋಷಿಸಿದೆ.

ಜೆಜೆಪಿ–ಎಎಸ್‌ಪಿ ಮತ್ತೊಂದು ಪಟ್ಟಿ ಬಿಡುಗಡೆ

ಚಂಡೀಗಢ: ಜನನಾಯಕ್‌ ಜನತಾ ಪಕ್ಷ (ಜೆಜೆಪಿ) ಮತ್ತು ಆಜಾದ್‌ ಸಮಾಜವಾದಿ ಪಕ್ಷಗಳ (ಎಎಸ್‌ಪಿ) ಮೈತ್ರಿಯು ಗುರುವಾರ ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಪಟ್ಟಿಯಲ್ಲಿ 13 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು ಪಕ್ಷದ ಹಿರಿಯ ನಾಯಕ ರಮೇಶ್‌ ಖಟಕ್‌ ಅವರನ್ನು ಖರಖೋಡಾ ಸೆಗ್ಮೆಂಟ್‌ ಕ್ಷೇತ್ರದಿಂದ ಕಣಕ್ಕಿಳಿಸಿದೆ. 13 ಕ್ಷೇತ್ರಗಳ ಪೈಕಿ ಭೀವಾನಿ ಬಹದೂರ್‌ಗಢ ಮಹೇಂದ್ರಗಢ ಮತ್ತು ಬಾದ್‌ಶಹಪುರ ಕ್ಷೇತ್ರಗಳಲ್ಲಿ ಎಎಸ್‌ಪಿ ಸ್ಪರ್ಧೆ ನೀಡಲಿದೆ.

‘ಕಾಂಗ್ರೆಸ್‌–ಎನ್‌ಸಿ ಮೈತ್ರಿಗೆ ಮತ ಹಾಕಿ’

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಎನ್‌ಸಿ ಮೈತ್ರಿಗೆ ಮತ ಹಾಕಿ ಪೂರ್ಣ ಬಹುಮತ ನೀಡಿ ಎಂದು ಕಾಂಗ್ರೆಸ್‌ ಜನರಲ್ಲಿ ಗುರುವಾರ ಮನವಿ ಮಾಡಿದೆ.

ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಅವರು ‘ಜಮ್ಮು ಮತ್ತು ಕಾಶ್ಮೀರದಲ್ಲಿ ಬಲಿಷ್ಠ ಸರ್ಕಾರ ಬೇಕು. ಮೈತ್ರಿಗೆ ಮತಹಾಕಿ ಗೆಲ್ಲಿಸಿ. ಒಂದೇ ಒಂದು ಕ್ಷೇತ್ರವೂ ಮೈತ್ರಿ ಬಿಟ್ಟು ಬೇರೆ ಪಕ್ಷಗಳ ಪಾಲಾಗಬಾರದು. ಹೀಗಾದಾಗ ಮಾತ್ರ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಾಗುತ್ತದೆ’ ಎಂದು ಕೋರಿದರು.

‘ಬೇರೆ ರಾಜ್ಯಗಳಂತೆ ಇಲ್ಲಿಯೂ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸಬಹುದು. ಅವರು  (ಬಿಜೆಪಿ ನಾಯಕರು) ಪಕ್ಷವನ್ನು ಇಬ್ಭಾಗ ಮಾಡುತ್ತಾರೆ ಶಾಸಕರನ್ನು ಕೊಂಡುಕೊಳ್ಳುತ್ತಾರೆ ಸಿಬಿಐ ಇ.ಡಿಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಹೇಗಾದರೂ ಮಾಡಿ ಸರ್ಕಾರ ರಚನೆಗೆ ಯತ್ನಿಸುತ್ತಾರೆ’ ಎಂದು ಆರೋಪಿಸಿದರು.

‘ನಾವು ಪಕ್ಷೇತರ ಅಭ್ಯರ್ಥಿಗಳು ಮತ್ತು ಸಣ್ಣ ಪಕ್ಷಗಳ ವಿರೋಧಿಯಲ್ಲ. ಆದರೆ ಜನರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಕಾಂಗ್ರೆಸ್‌–ಎನ್‌ಸಿ ಮೈತ್ರಿಗೇ ಮತ ಹಾಕಿ’ ಎಂದು ಮನವಿ ಮಾಡಿದರು.

ಬಿಜೆಪಿ ಆಕ್ರಮಣದ ವಿರುದ್ಧ ಹೋರಾಡುವ ಏಕೈಕ ಪಕ್ಷ ಪಿಡಿಪಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆ ಸಂಪನ್ಮೂಲ ಉದ್ಯೋಗದ ಮೇಲೆ ಬಿಜೆಪಿ ನಡೆಸುತ್ತಿರುವ ಆಕ್ರಮಣದ ವಿರುದ್ಧ ಹೋರಾಡುವ ಏಕೈಕ ಪಕ್ಷ ಪಿಡಿಪಿ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಗುರುವಾರ ಹೇಳಿದರು.

ಅನಂತ್‌ನಾಗ್‌ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಿಡಿಪಿ ಪಕ್ಷವು ಅಧಿಕಾರದಲ್ಲಿ ಇದ್ದಾಗ  ಜಮ್ಮು–ಕಾಶ್ಮೀರ ಅದರಲ್ಲೂ ದಕ್ಷಿಣ ಕಾಶ್ಮೀರದ ಜನರನ್ನು ಕಷ್ಟಕಾಲದಲ್ಲಿ ಕಾಪಾಡಿತ್ತು. ಪಿಡಿಪಿಯು ಜಮ್ಮು ಮತ್ತು ಕಾಶ್ಮೀರ ಜನರನ್ನು ಪ್ರತಿನಿಧಿಸುತ್ತದೆ ಅವರ ಬಗ್ಗೆ ಧ್ವನಿ ಎತ್ತುತ್ತದೆ ಎಂದು ಹೇಳಿದರು.

ಉದ್ಯೋಗ ಸೃಷ್ಟಿ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ನೀಡಿರುವ ಭರವಸೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಕಳೆದ 10 ವರ್ಷಗಳಿಂದ ಕನಿಷ್ಠ ಒಂದು ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT