ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಐದು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿದೆ.
ಇದರೊಂದಿಗೆ ಈವರೆಗೆ ಒಟ್ಟು 86 ಅಭ್ಯರ್ಥಿಗಳನ್ನು ಘೋಷಿಸಿದೆ.
ಕೊನೆಯ ಕ್ಷಣದ ಮೈತ್ರಿ ಸಾಧ್ಯತೆಯ ಹಿನ್ನೆಲೆಯಲ್ಲಿ ಇನ್ನುಳಿದ ನಾಲ್ಕು ಸ್ಥಾನಗಳಲ್ಲಿ ಪಕ್ಷವು ಅಭ್ಯರ್ಥಿಗಳನ್ನು ಹೆಸರಿಸಿಲ್ಲ.
40 ಅಭ್ಯರ್ಥಿಗಳನ್ನು ಒಳಗೊಂಡ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಕೆಲವೇ ಗಂಟೆಯ ನಂತರ 4ನೇ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಕೈತಾಲ್‌ನಿಂದ ಸಂಸದ ರಣದೀಪ್ ಸುರ್ಜೇವಾಲಾ ಅವರ ಪುತ್ರ ಆದಿತ್ಯ ಸುರ್ಜೇವಾಲಾ ಅವರನ್ನು ಕಣಕ್ಕಿಳಿಸಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಜತೆ ಮೈತ್ರಿ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 (ಇಂದು) ಕೊನೆಯ ದಿನವಾಗಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಜಮ್ಮು: ಕಾಂಗ್ರೆಸ್‌ನಿಂದ ನಾಲ್ಕನೇ ಪಟ್ಟಿ ಬಿಡುಗಡೆ...
ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರ ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಐದು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ಇದರೊಂದಿಗೆ ಒಟ್ಟು 39 ಅಭ್ಯರ್ಥಿಗಳನ್ನು ಪಕ್ಷವು ಅಂತಿಮಗೊಳಿಸಿದೆ.