ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ: ಪೊಲೀಸರಿಗೆ ಹೈಕೋರ್ಟ್ ತರಾಟೆ

Published 6 ನವೆಂಬರ್ 2023, 16:25 IST
Last Updated 6 ನವೆಂಬರ್ 2023, 16:25 IST
ಅಕ್ಷರ ಗಾತ್ರ

ಚೆನ್ನೈ: ವಿಭಜನಕಾರಿ ಪರಿಣಾಮ ಉಂಟುಮಾಡುವ ಹೇಳಿಕೆಗಳನ್ನು ನೀಡುವುದರ ಅಪಾಯವನ್ನು ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಅರಿತುಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್‌ ಹೇಳಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಸನಾತನ ಧರ್ಮ ವಿರೋಧಿ ಸಭೆಯಲ್ಲಿ ಪಾಲ್ಗೊಂಡಿದ್ದ ಆಡಳಿತಾರೂಢ ಡಿಎಂಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದುದಕ್ಕಾಗಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಅಧಿಕಾರದಲ್ಲಿ ಇರುವವರು ಮಾದಕವಸ್ತುಗಳ ನಿರ್ಮೂಲನೆಗೆ, ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಗಮನ ನೀಡುವುದು ಒಳ್ಳೆಯದು ಎಂದು ನ್ಯಾಯಮೂರ್ತಿ ಜಿ. ಜಯಚಂದ್ರನ್ ಹೇಳಿದ್ದಾರೆ.

‘ದ್ರಾವಿಡ ಸಿದ್ಧಾಂತದ ನಿರ್ಮೂಲನೆಗೆ ಮತ್ತು ತಮಿಳರ ನಡುವೆ ಸಮನ್ವಯಕ್ಕೆ ಸಭೆಯೊಂದನ್ನು ಆಯೋಜಿಸಲು ನನಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಆದೇಶ ನೀಡಬೇಕು’ ಎಂಬ ಮನವಿ ಇರುವ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌ ಈ ಮಾತು ಹೇಳಿದೆ. ಮಗೇಶ್ ಕಾರ್ತಿಕೇಯನ್ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು.

‘ಸನಾತನ ಧರ್ಮ ನಿರ್ಮೂಲನ ಸಭೆ’ಯ ನಂತರದಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಸಭೆಯಲ್ಲಿ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ವಿವಾದವೊಂದು ಸೃಷ್ಟಿಯಾಗಿತ್ತು. ಸಚಿವ ಪಿ.ಕೆ. ಶೇಖರ್ ಬಾಬು ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ವರದಿಗಳಿವೆ.

ಸನಾತನ ಧರ್ಮ ವಿರೋಧಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿಯವರು, ‘ಅಧಿಕಾರದಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಸಿದ್ಧಾಂತ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ದೂರವಿರಬೇಕು’ ಎಂದು ಹೇಳಿದ್ದಾರೆ.

‘ಅರ್ಜಿದಾರರ ಮನವಿಗೆ ಸ್ಪಂದಿಸಿದರೆ, ಸಾರ್ವಜನಿಕ ನೆಮ್ಮದಿಗೆ ಇನ್ನಷ್ಟು ತೊಂದರೆ ಉಂಟಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ. ‘ವಿಭಜನಕಾರಿ ಆಲೋಚನೆಗಳನ್ನು ಪ್ರಚುರಪಡಿಸಲು, ಯಾವುದೇ ಸಿದ್ಧಾಂತವನ್ನು ನಿರ್ಮೂಲಗೊಳಿಸಲು ಅಥವಾ ನಾಶಮಾಡಲು ಈ ದೇಶದಲ್ಲಿ ಯಾವ ವ್ಯಕ್ತಿಗೂ ಹಕ್ಕು ಇಲ್ಲ. ಹಲವು ಸಿದ್ಧಾಂತಗಳ ಸಹಜೀವನ ಈ ದೇಶದ ಹೆಗ್ಗುರುತು’ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT