ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿಗೆ ದೆಹಲಿ ಹೈಕೋರ್ಟ್‌ ನೋಟಿಸ್‌

Published 22 ಮೇ 2023, 13:35 IST
Last Updated 22 ಮೇ 2023, 13:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ರಾಯಿಟರ್ಸ್‌): ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ಗೆ (ಬಿಬಿಸಿ) ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.

ಸಾಕ್ಷ್ಯಚಿತ್ರದಿಂದಾಗಿ ದೇಶದ ಘನತೆಗೆ ಧಕ್ಕೆಯುಂಟಾಗಿದೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ನ್ಯಾಯಾಂಗದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಗುಜರಾತ್‌ ಮೂಲದ ‘ಜಸ್ಟಿಸ್‌ ಆನ್‌ ಟ್ರಯಲ್‌’ ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಏಕಸದಸ್ಯ ಪೀಠವು ಬಿಬಿಸಿ (ಬ್ರಿಟನ್‌) ಹಾಗೂ ಬಿಬಿಸಿ ಇಂಡಿಯಾಗೆ ನೋಟಿಸ್‌ ನೀಡಿದೆ.

ಎನ್‌ಜಿಒ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ, ‘ಸಾಕ್ಷ್ಯಚಿತ್ರದ ಮುಖೇನ ಭಾರತದ ಘನತೆಗೆ ಚ್ಯುತಿ ಉಂಟುಮಾಡಲಾಗಿದೆ. ನ್ಯಾಯಾಂಗ ಸೇರಿದಂತೆ ಇಡೀ ವ್ಯವಸ್ಥೆಯನ್ನೇ ಅವಹೇಳನ ಮಾಡಲಾಗಿದೆ’ ಎಂದು ದೂರಿದರು. 

ಆಗ ನ್ಯಾಯಪೀಠವು ಪ್ರತಿವಾದಿಗಳಿಗೆ (ಬಿಬಿಸಿ ಬ್ರಿಟನ್‌ ಹಾಗೂ ಬಿಬಿಸಿ ಇಂಡಿಯಾ) ನೋಟಿಸ್‌ ಜಾರಿಗೊಳಿಸುವಂತೆ ಸೂಚಿಸಿತು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 25ಕ್ಕೆ ಪಟ್ಟಿ ಮಾಡುವಂತೆಯೂ ನಿರ್ದೇಶಿಸಿತು. 

‘ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿರುವ ಬಿಬಿಸಿಯು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಇದು ಎರಡು ಕಂತುಗಳನ್ನು ಒಳಗೊಂಡಿದೆ. ಭಾರತದಲ್ಲಿ ಬಿಬಿಸಿಯು ಪ್ರಾದೇಶಿಕ ಕಚೇರಿಯನ್ನು ಹೊಂದಿದೆ. ಸಾಕ್ಷ್ಯಚಿತ್ರದ ಎರಡೂ ಕಂತುಗಳನ್ನೂ ಈ ವರ್ಷದ ಜನವರಿಯಲ್ಲಿ ಪ್ರದರ್ಶಿಸಲಾಗಿದೆ. ಸಾಕ್ಷ್ಯಚಿತ್ರವು ಭಾರತದ ವರ್ಚಸ್ಸಿಗೆ ಕುಂದುಂಟುಮಾಡುವ ವಿಷಯವನ್ನು ಒಳಗೊಂಡಿದೆ. ಇದಕ್ಕಾಗಿ ಬಿಬಿಸಿಯನ್ನು ಹೊಣೆಯಾಗಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. 

‘ನ್ಯಾಯಾಲಯದ ತೀರ್ಪಿನ ಕುರಿತು ನಮಗೆ ಮಾಹಿತಿ ಲಭಿಸಿದೆ. ಈ ಹಂತದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ’ ಎಂದು ಬಿಬಿಸಿ ವಕ್ತಾರರೊಬ್ಬರು ಹೇಳಿದ್ದಾರೆ. 

ಈ ಸಾಕ್ಷ್ಯಚಿತ್ರವು 2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದ್ದಾಗಿದೆ. ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಗಲಭೆ ನಡೆದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT