ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭಪಾತಕ್ಕೆ ಅವಕಾಶ: ಆದೇಶ ಹಿಂಪಡೆದ ದೆಹಲಿ ಹೈಕೋರ್ಟ್‌

Published 23 ಜನವರಿ 2024, 16:30 IST
Last Updated 23 ಜನವರಿ 2024, 16:30 IST
ಅಕ್ಷರ ಗಾತ್ರ

ನವದೆಹಲಿ: 29 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಮಹಿಳೆಯೊಬ್ಬರಿಗೆ ಜನವರಿ 4ರಂದು ನೀಡಿದ್ದ ಅನುಮತಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಹಿಂಪಡೆದಿದೆ. ಈ ಮಹಿಳೆಯು ಅಕ್ಟೋಬರ್‌ನಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು.

ಹಿಂದಿನ ಆದೇಶವನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರು ಹೇಳಿದ್ದಾರೆ. ಈಗ ಭ್ರೂಣಕ್ಕೆ 32 ವಾರಗಳಾಗಿವೆ. ತಾಯಿಯು ಏಮ್ಸ್‌ ಅಥವಾ ಕೇಂದ್ರ, ರಾಜ್ಯ ಸರ್ಕಾರಗಳ ಇತರ ಯಾವುದೇ ಆಸ್ಪತ್ರೆಗೆ ಹೆರಿಗೆಗೆ ತೆರಳಬಹುದು. ಶಿಶುವನ್ನು ದತ್ತು ನೀಡುವ ಬಯಕೆ ತಾಯಿಗೆ ಬಂದಲ್ಲಿ, ಕೇಂದ್ರ ಸರ್ಕಾರವು ದತ್ತು ಪ್ರಕ್ರಿಯೆಯು ಸುಲಲಿತವಾಗಿ ಹಾಗೂ ಶೀಘ್ರವಾಗಿ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಸಾದ್ ಅವರು ಆದೇಶದಲ್ಲಿ ಹೇಳಿದ್ದಾರೆ.

ಖಿನ್ನತೆಗೆ ಒಳಗಾಗಿರುವ ಈ ವಿಧವೆಗೆ, 29 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿ ಕೋರ್ಟ್‌ ಆದೇಶ ನೀಡಿತ್ತು. ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಸಂತಾನ ಸೃಷ್ಟಿಸದೆ ಇರುವ ಹಕ್ಕನ್ನೂ ಒಳಗೊಂಡಿದೆ ಎಂದು ಕೋರ್ಟ್‌ ಹೇಳಿತ್ತು.

ಇನ್ನೂ ಜನಿಸಿರದ ಶಿಶುವಿನ ಜೀವಿಸುವ ಹಕ್ಕನ್ನು ರಕ್ಷಿಸುವ ಬಗ್ಗೆ ಕೋರ್ಟ್‌ ಗಮನಹರಿಸಬೇಕು, ಆ ಮಗು ಉಳಿಯುವ ಸಾಧ್ಯತೆ ಹೆಚ್ಚಿದೆ, ಜನವರಿ 4ರ ಆದೇಶವನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವು ಮನವಿ ಮಾಡಿತ್ತು.

ಮಹಿಳೆಯ ವೈದ್ಯಕೀಯ ತಪಾಸಣೆ ನಡೆಸಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು (ಏಮ್ಸ್‌), ತಾಯಿ ಮತ್ತು ಭ್ರೂಣದ ಆರೋಗ್ಯ ಇನ್ನಷ್ಟು ಉತ್ತಮವಾಗಲು ಇನ್ನೂ ಎರಡರಿಂದ ಮೂರು ವಾರ ಕಾಯುವುದು ಒಳಿತು ಎಂದು ಹೇಳಿತ್ತು. 

ಈ ಮಹಿಳೆ ಪದವಿ ಪಡೆದಿದ್ದಾರೆ. ಮನಃಶ್ಶಾಸ್ತ್ರೀಯ ವರದಿಯ ಪ್ರಕಾರ ಮಹಿಳೆಯು ಖಿನ್ನತೆಯಿಂದ ಮತ್ತು ಒತ್ತಡದಿಂದ ಬಳಲುತ್ತಿದ್ದಾರೆಯೇ ವಿನಾ ಅವರಿಗೆ ಬುದ್ಧಿವಿಕಲ್ಪ ಆಗಿಲ್ಲ. ಅವರ ಬಸಿರು, ಗರ್ಭಪಾತವನ್ನು ಅಗತ್ಯವಾಗಿಸುವಂತಹ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಭ್ರೂಣದ ಬೆಳವಣಿಗೆಯಲ್ಲಿ ಅಸಹಜತೆ ಇಲ್ಲ. ಹೀಗಾಗಿ ಭ್ರೂಣವನ್ನು ತೆಗೆಸುವುದಕ್ಕೆ ಸಮರ್ಥನೆ ಇಲ್ಲ, ಅದು ನೈತಿಕವಾಗಿ ಸರಿಯೂ ಅಲ್ಲ. ಅವಧಿಪೂರ್ವ ಪ್ರಸವಕ್ಕೆ ಮುಂದಾದರೆ, ಅದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯಕೀಯ ಮಂಡಳಿ ಹೇಳಿದೆ ಎಂದು ಕೋರ್ಟ್‌ ವಿವರಿಸಿದೆ.

ಈ ಮಹಿಳೆಯು ಅಕ್ಟೋಬರ್‌ನಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಅವರಿಗೆ ತಾವು ಗರ್ಭಿಣಿ ಎಂಬುದು ಪತಿಯ ಸಾವಿನ ನಂತರ ಗೊತ್ತಾಯಿತು. ‘ಆಕೆಗೆ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು, ಏಕೆಂದರೆ ಇದಕ್ಕೆ ಅವಕಾಶ ಕೊಡದೆ ಇದ್ದರೆ ಮಹಿಳೆಯು ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು’ ಎಂದು ಕೋರ್ಟ್‌ ಜನವರಿ 4ರ ಆದೇಶದಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT