ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಭ್‌ ಮೊಮ್ಮಗಳ ವಿರುದ್ಧ ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ

ಯೂಟ್ಯೂಬ್‌ನಿಂದ ಆಕ್ಷೇಪಾರ್ಹ ವಿಡಿಯೊಗಳ ತೆರವಿಗೆ ದೆಹಲಿ ಹೈಕೋರ್ಟ್‌ ಸೂಚನೆ
Last Updated 20 ಏಪ್ರಿಲ್ 2023, 13:04 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕುಟುಂಬದ ಕುಡಿ ಆರಾಧ್ಯ ಬಚ್ಚನ್‌ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಯೂಟ್ಯೂಬ್‌ ಚಾನೆಲ್‌ಗಳಿಗೆ ಗುರುವಾರ ನಿರ್ಬಂಧ ಹೇರಿರುವ ದೆಹಲಿ ಹೈಕೋರ್ಟ್‌, ‘ಇದು ಸಮಾಜದಲ್ಲಿ ಬೇರೂರುತ್ತಿರುವ ರೋಗಗ್ರಸ್ತ ವಿಕೃತ ಮನಸ್ಥಿತಿಗೆ ಹಿಡಿದ ಕೈಗನ್ನಡಿ’ ಎಂದು ವ್ಯಾಖ್ಯಾನಿಸಿದೆ.

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಭಿಷೇ‌ಕ್‌ ಬಚ್ಚನ್‌ ದಂಪತಿಯ ಪುತ್ರಿ ಆರಾಧ್ಯಳ ಆರೋಗ್ಯ ಕುರಿತು ಆಧಾರರಹಿತ ವದಂತಿ ಹಬ್ಬಿಸುತ್ತಿರುವ ಆಕ್ಷೇಪಾರ್ಹ ವಿಡಿಯೊಗಳನ್ನು ತಕ್ಷಣವೇ ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಗೂಗಲ್‌ ಸಂಸ್ಥೆಗೆ ತಾಕೀತು ಮಾಡಿದೆ.

ವೀಕ್ಷಕರಿಂದ ಹೆಚ್ಚಿನ ವೀವ್ಸ್‌ ಪಡೆಯಲು ಪೈಪೋಟಿಗೆ ಬಿದ್ದಿರುವ ಕೆಲವು ಯೂಟ್ಯೂಬ್‌ ಚಾಲನೆಗಳು ಆರಾಧ್ಯಳ ಆರೋಗ್ಯ ತೀವ್ರ ಹದಗೆಟ್ಟಿದೆ. ಆಕೆ ಮೃತಪಟ್ಟಿದ್ದಾಳೆ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದವು. ಇದರಿಂದ ಬಚ್ಚನ್‌ ಕುಟುಂಬ ಕಸಿವಿಸಿಗೊಂಡಿತ್ತು. ಇಂಥ ಚಾನೆಲ್‌ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕೋರಿ 11 ವರ್ಷದ ಆರಾಧ್ಯ ಹಾಗೂ ಅಭಿಷೇಕ್ ಬಚ್ಚನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಹರಿಶಂಕರ್‌, ‘ಪ್ರತಿ ಮಗುವನ್ನೂ ಗೌರವಿಸುವುದು ಎಲ್ಲರ ಜವಾಬ್ದಾರಿ. ಮಗುವಿನ ಆರೋಗ್ಯ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡುವುದು ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟರು.

‘ಆಕ್ಷೇಪಾರ್ಹ ವಿಡಿಯೊಗಳ ಬಗ್ಗೆ ದೂರುದಾರರಿಗೆ ಗೂಗಲ್‌ ಮಾಹಿತಿ ನೀಡಬೇಕು. ಇಂತಹ ವಿಡಿಯೊಗಳು ಯಾವಾಗ ಅಪ್‌ಲೋಡ್‌ ಆಗಿವೆ. ಇದು ಕಂಪನಿಯ ಗಮನಕ್ಕೆ ಯಾವಾಗ ಬಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಮಧ್ಯಂತರ ಆದೇಶದಲ್ಲಿ ಸೂಚಿಸಿದೆ.

ಇನ್ನು ಮುಂದೆ ಆರಾಧ್ಯಳ ಆರೋಗ್ಯದ ಬಗ್ಗೆ ಯಾವುದೇ ಯೂಟ್ಯೂಬ್‌ ಚಾನೆಲ್‌ಗಳು ವಿಡಿಯೊ ಸಿದ್ಧಪಡಿಸಬಾರದು. ಅವುಗಳನ್ನು ಪ್ರಸಾರ ಮಾಡಬಾರದು. ಮಗುವಿನ ಹಿತಾಸಕ್ತಿ ರಕ್ಷಣೆ ಸಂಬಂಧ ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದು ಹೇಳಿದೆ.

ಯೂಟ್ಯೂಬ್‌ನಲ್ಲಿ ಆಕ್ಷೇಪಾರ್ಹ ವಿಡಿಯೊಗಳ ಪ್ರಸಾರ ತಡೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರತಿವಾದಿ ಗೂಗಲ್‌ ಕಂಪನಿ ಪರ ಹಾಜರಿದ್ದ ವಕೀಲರಿಗೆ ಪ್ರಶ್ನಿಸಿದ ನ್ಯಾಯಾಲಯವು, ಈ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದೆ.

ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ಗೂಗಲ್‌ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT