ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ದೇಶದ ವಿವಿಧ ಭಾಗಗಳಲ್ಲಿ ಬಿಸಿಲ ಬೇಗೆಯ ಬವಣೆ

ದೇಶದ ವಿವಿಧ ಭಾಗಗಳಲ್ಲಿ ಬಿಸಿಗಾಳಿಯ ಅಪಾಯ
Last Updated 28 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಭಾರತ ಉಪಖಂಡ ಮತ್ತು ಪಾಕಿಸ್ತಾನದ ಪ್ರದೇಶದಲ್ಲಿ ಪ್ರತಿ ವರ್ಷ ಮಾರ್ಚ್‌–ಮೇ ಅವಧಿಯಲ್ಲಿ ಉಷ್ಣಾಂಶ ಏರಿಕೆಯಾಗುತ್ತದೆ. ಈ ಅವಧಿಯಲ್ಲಿ ಉಷ್ಣಾಂಶ ಏರಿಕೆಯಾಗುವುದು ಸಾಮಾನ್ಯ ವಿದ್ಯಮಾನವೇ ಆದರೂ, ಕೆಲವೊಮ್ಮೆ ಏರಿಕೆಯು ತೀವ್ರ ಪ್ರಮಾಣದಲ್ಲಿ ಇರುತ್ತದೆ. ತೀವ್ರತರವಾದ ಈ ಉಷ್ಣಾಂಶಕ್ಕೆ ಸಿಲುಕಿದ ಪಕ್ಷಿಗಳು, ಪ್ರಾಣಿಗಳು ಮತ್ತು ಮನುಷ್ಯರು ಸತ್ತು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸ್ಥಿತಿಯನ್ನು ಬಿಸಿಗಾಳಿ ಎಂದು ವ್ಯಾಖ್ಯಾನಿಸಲಾಗಿದೆ. ಈ ವರ್ಷವೂ ಅಂಥದ್ದೊಂದು ಬಿಸಿಗಾಳಿ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತದಲ್ಲಿ, ಈ ವರ್ಷದ ಮಾರ್ಚ್‌ನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ದೇಶದಲ್ಲಿ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶವನ್ನು ದಾಖಲಿಸುವ ಪರಿಪಾಟ 1902ರಲ್ಲಿ ಆರಂಭವಾಯಿತು. ಈ 120 ವರ್ಷಗಳಲ್ಲಿ ಈ ಬಾರಿಯ ಮಾರ್ಚ್‌ ತಿಂಗಳೇ ಈವರೆಗಿನ ಅತ್ಯಂತ ಬಿಸಿಯಾದ ಮಾರ್ಚ್‌ ಎಂದು ತಜ್ಞರು ಹೇಳಿದ್ದಾರೆ. ಏಪ್ರಿಲ್‌ನ ಕೊನೆಯ ದಿನಗಳು ಮತ್ತು ಮೇ ಮೊದಲ ವಾರದ ಕೆಲವು ದಿನಗಳಲ್ಲಿ ಪಾಕಿಸ್ತಾನ ಮತ್ತು ಉತ್ತರ ಹಾಗೂ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಸಿಗಾಳಿ ಪರಿಸ್ಥಿತಿ ಇರಲಿದೆ. ಕೆಲವು ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ ತಿಂಗಳಲ್ಲಿ ಬಿಸಿಗಾಳಿ ತೀವ್ರವಾಗಲಿದೆ. ಕೆಲವು ಪ್ರದೇಶಗಳಲ್ಲಿ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್‌ನಷ್ಟಾಗುವ ಸಾಧ್ಯತೆ ಇದೆ. ಕೆಲವೆಡೆ ಇದು 47 ಡಿಗ್ರಿ ಸೆಲ್ಸಿಯಸ್‌ನಷ್ಟಾಗುವ ಅಪಾಯವೂ ಇವೆ ಎಂದು ಹಲವು ಖಾಸಗಿ ಹವಾಮಾನ ಸಂಸ್ಥೆಗಳು ಅಂದಾಜಿಸಿವೆ.

ಈ ಬಾರಿಯ ಬಿಸಿಗಾಳಿಯು ತೀವ್ರ ಬಿಸಿಗಾಳಿಯಾಗುವ ಸಾಧ್ಯತೆಗಳೂ ಇವೆ. ಇದರಿಂದ ಉತ್ತರದ ಬಯಲು ಪ್ರದೇಶದಲ್ಲಿ ದೂಳಿನ ಮಾರುತ ತಲೆದೋರುವ ಅಪಾಯಗಳಿವೆ. ಗಾಳಿ ತೀವ್ರ ಬಿಸಿಯಾಗಿದ್ದಾಗ ಪಾಕಿಸ್ತಾನದ ಪಂಜಾಬ್, ಸಿಂಧ್ ಪ್ರದೇಶದಿಂದ ಭಾರತದತ್ತ ಬೀಸುವ ಮಾರುತಗಳು ತಮ್ಮೊಂದಿಗೆ ದೂಳಿನ ಕಣಗಳನ್ನು ಹೊತ್ತು ತರುತ್ತವೆ. ಗುಜರಾತ್‌ನ ರಣ್‌ ಕಛ್ ಮತ್ತು ಥಾರ್‌ ಮರುಭೂಮಿ ಪ್ರದೇಶವನ್ನು ಹಾದು ಬರುವಾಗ ಈ ಮಾರುತವು ಮರಳಿನ ಕಣಗಳನ್ನೂ ಹೊತ್ತು ತರುತ್ತವೆ. ಈ ಕಣಗಳು ಮಾರುತದೊಂದಿಗೆ ದೂರದ ದೆಹಲಿ, ಲಖನೌ, ಕಾನ್ಪುರದವರೆಗೂ ಬಂದು ಬೀಳುತ್ತವೆ. ಈ ಬಾರಿಯೂ ಪಂಜಾಬ್‌, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಮತ್ತು ಬಿಹಾರದ ಕೆಲವೆಡೆ ದೂಳಿನ ಮಾರುತ ತಲೆದೋರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಗಾಳಿ, ತೀವ್ರ ಬಿಸಿಗಾಳಿ

ಒಂದು ಭೌಗೋಳಿಕ ಪ್ರದೇಶದಲ್ಲಿನ ಉಷ್ಣಾಂಶವು ಅಲ್ಲಿನ ಸರಾಸರಿ ಉಷ್ಣಾಂಶಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ಅದರಿಂದ ಮಾನವರ ಆರೋಗ್ಯ ಸ್ಥಿತಿಯಲ್ಲಿ ತೀವ್ರ ಏರುಪೇರಾಗುವ ಮತ್ತು ಸಾವು ಸಂಭವಿಸುವಷ್ಟು ತೀವ್ರವಾದ ಪರಿಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಬಿಸಿಗಾಳಿಯನ್ನು ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ಹವಾಮಾನ ಇಲಾಖೆ ಇದೇ ರೀತಿ ವ್ಯಾಖ್ಯಾನಿಸಿವೆ. ಆದರೆ ಇಂತಹ ಒಂದು ಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಬೇಕಾದರೆ ಹಲವು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಈ ಮಾನದಂಡಗಳು, ಆಯಾ ಪ್ರದೇಶದಲ್ಲಿನ ಸರಾಸರಿ ಗರಿಷ್ಠ ತಾಪಮಾನದ ಆಧಾರದಲ್ಲಿ ಬದಲಾಗುತ್ತದೆ.

1. ಯಾವುದೇ ಬಯಲು ಪ್ರದೇಶದಲ್ಲಿ ದಿನವೊಂದರಲ್ಲಿ ಗರಿಷ್ಠ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ ಅದನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಗುಡ್ಡಗಾಡು ಪ್ರದೇಶದಲ್ಲಿ ದಿನವೊಂದರಲ್ಲಿ ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ ಅದನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

2. ಯಾವುದೇ ಒಂದು ಪ್ರದೇಶದಲ್ಲಿನ ಉಷ್ಣಾಂಶವು, ಸರಾಸರಿ ಗರಿಷ್ಠ ಉಷ್ಣಾಂಶಕ್ಕಿಂತ 4.5ರಿಂದ 6.4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದರೆ ಆ ಪರಿಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಅದೇ ಪ್ರದೇಶದಲ್ಲಿನ ಉಷ್ಣಾಂಶವು, ಸರಾಸರಿ ಗರಿಷ್ಠ ಉಷ್ಣಾಂಶಕ್ಕಿಂತ 6.5 ಡಿಗ್ರಿ ಸೆಲ್ಸಿಯಸ್‌ ಮತ್ತು ಅದಕ್ಕಿಂತ ಹೆಚ್ಚು ದಾಖಲಾದರೆ ಆ ಪರಿಸ್ಥಿತಿಯನ್ನು ತೀವ್ರ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

3. ಯಾವುದೇ ಪ್ರದೇಶದಲ್ಲಿ ದಿನದ ವೇಳೆ ಗರಿಷ್ಠ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್‌ ಮತ್ತು ಅದಕ್ಕಿಂತ ಹೆಚ್ಚಾದರೆ ಆ ಪರಿಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಅದೇ ಪ್ರದೇಶದಲ್ಲಿ ದಿನದ ವೇಳೆ ಗರಿಷ್ಠ ಉಷ್ಣಾಂಶವು 47 ಡಿಗ್ರಿ ಸೆಲ್ಸಿಯಸ್‌ ಮತ್ತು ಅದಕ್ಕಿಂತ ಹೆಚ್ಚಾದರೆ ಆ ಪರಿಸ್ಥಿತಿಯನ್ನು ತೀವ್ರ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

4. ಯಾವುದೇ ಪ್ರದೇಶದಲ್ಲಿ ರಾತ್ರಿ ವೇಳೆಯ ಉಷ್ಣಾಂಶವು, ಅಲ್ಲಿನ ಸರಾಸರಿ ಕನಿಷ್ಠ ಉಷ್ಣಾಂಶಕ್ಕಿಂತ 4.5ರಿಂದ 6.4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದರೆ ಆ ಪರಿಸ್ಥಿತಿಯನ್ನು ಬಿಸಿರಾತ್ರಿ ಎಂದು ಪರಿಗಣಿಸಲಾಗುತ್ತದೆ. ಅದೇ ಪ್ರದೇಶದಲ್ಲಿನ ರಾತ್ರಿಯ ಉಷ್ಣಾಂಶವು, ಸರಾಸರಿ ಕನಿಷ್ಠ ಉಷ್ಣಾಂಶಕ್ಕಿಂತ 6.5 ಮತ್ತು ಅದಕ್ಕಿಂತ ಹೆಚ್ಚು ದಾಖಲಾದರೆ ಆ ಪರಿಸ್ಥಿತಿಯನ್ನು ತೀವ್ರ ಬಿಸಿರಾತ್ರಿ ಎಂದು ಪರಿಗಣಿಸಲಾಗುತ್ತದೆ

ತೀವ್ರ ಒತ್ತಡದಿಂದ ಏರಿಕೆ

ಯಾವುದೇ ಒಂದು ಭೂ ಪ್ರದೇಶದಲ್ಲಿ ಉಷ್ಣಾಂಶವು ಹೆಚ್ಚಾಗಿ ಇದ್ದಾಗ, ಆ ಪ್ರದೇಶದಲ್ಲಿನ ವಾತಾವರಣದಲ್ಲಿ ತೀವ್ರ ಒತ್ತಡ ಉಂಟಾಗುತ್ತದೆ. ಹೀಗೆ ಒತ್ತಡ ಉಂಟಾದಾಗ, ವಾತಾವರಣದಲ್ಲಿನ ಗಾಳಿಯು ನೆಲದತ್ತ ನುಗ್ಗುತ್ತದೆ. ಆಗ ಅಲ್ಲಿನ ಗಾಳಿಯ ಸಾಂದ್ರತೆ ಹೆಚ್ಚುತ್ತದೆ. ಸಾಂದ್ರತೆ ಹೆಚ್ಚುವುದರಿಂದ ಗಾಳಿಯ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.

ಆ ಪ್ರದೇಶದಲ್ಲಿ ಗಾಳಿಯ ಒತ್ತಡ ತೀವ್ರವಾಗುವುದರಿಂದ ಮತ್ತು ಸಾಂದ್ರತೆ ಅತ್ಯಧಿಕವಾಗಿರುವುದರಿಂದ ಮೋಡಗಳು ಆ ಪ್ರದೇಶವನ್ನು ಪ್ರವೇಶಿಸುವುದು ಸಾಧ್ಯವಾಗುವುದಿಲ್ಲ. ಬೇರೆ ಪ್ರದೇಶದಲ್ಲಿನ ತಂಪು ಗಾಳಿಯೂ ಅತ್ತ ಬೀಸುವುದಿಲ್ಲ. ಇದರಿಂದ ಉಷ್ಣಾಂಶವು ಮತ್ತಷ್ಟು ಏರಿಕೆಯಾಗುತ್ತದೆ. ಸಾಮಾನ್ಯವಾಗಿ ಒಂದು ಪ್ರದೇಶದಲ್ಲಿ ಇಂತಹ ಸ್ಥಿತಿಯು ಎರಡರಿಂದ ಮೂರು ದಿನಗಳವರೆಗೆ ಇರುತ್ತದೆ. ಕೆಲವು ಸಂದರ್ಭದಲ್ಲಿ ಒಂದು ವಾರದವರೆಗೂ ಈ ಪರಿಸ್ಥಿತಿ ವಿಸ್ತರಿಸುತ್ತದೆ ಎಂದು ವಿವರಿಸಲಾಗಿದೆ.

ಭಾರತದಲ್ಲಿ ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಂತ್ಯದ ಅವಧಿಯಲ್ಲಿ ಬಿಸಿಗಾಳಿ ಪರಿಸ್ಥಿತಿ ತಲೆದೋರುತ್ತದೆ.

ವಿದ್ಯುತ್ ಕೊರತೆ: ಕೈಗಾರಿಕಾ ಚಟುವಟಿಕೆ ಕುಂಠಿತ

ಬಿಸಿಗಾಳಿಯು ತಯಾರಿಕಾ ವಲಯದ ಮೇಲೆ ಪರಿಣಾಮ ಬೀರಿದೆ. ತೀವ್ರ ತಾಪಮಾನದ ಕಾರಣ ವಿದ್ಯುತ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ರಾಜಸ್ಥಾನ, ಗುಜರಾತ್ ಹಾಗೂ ಆಂಧ್ರ ಪ್ರದೇಶದ ಕೈಗಾರಿಕೆಗಳಿಗೆ ನಾಲ್ಕು ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೀಗಾಗಿ ಕೈಗಾರಿಕಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ದೆಹಲಿಯಲ್ಲಿ ಏಪ್ರಿಲ್‌ ತಿಂಗಳಲ್ಲಿ ವಿದ್ಯುತ್‌ಗೆ ದಾಖಲೆ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದೆ. ಗುರುವಾರದ (ಏ.28) ವಿದ್ಯುತ್ ಬೇಡಿಕೆ 6,000 ಮೆಗಾವಾಟ್‌ ದಾಟಿದೆ ಎಂದು ಡಿಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರವಾದ ಬಿಸಿಲಿಗೆ ಒಡ್ಡಿಕೊಂಡಿರುವ ರಾಜಸ್ಥಾನದ ಗ್ರಾಮೀಣ ಭಾಗದಲ್ಲೂ ನಾಲ್ಕು ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಲಕ್ಷಾಂತರ ಜನರು ಬಿಸಿಲಿನ ಬೇಗೆ ಅನುಭವಿಸುತ್ತಿದ್ದಾರೆ.

ಕೊರೊನಾ ವೈರಸ್ ದಾಳಿಯಿಟ್ಟಿದ್ದ ಸಂದರ್ಭದಲ್ಲಿ ಕೈಗಾರಿಕಾ ಚಟುವಟಿಕೆಗಳ ಮೇಲೆ ವಿಧಿಸಿದ್ದ ನಿರ್ಬಂಧದ ಬಳಿಕ, ಇದೀಗ ವಿದ್ಯುತ್ ಕೊರತೆಯ ಕಾರಣಕ್ಕೆ ಕೈಗಾರಿಕಾ ಚಟುವಟಿಕೆಗಳು ಕೊಂಚ ಮಟ್ಟಿಗೆ ಕುಂಠಿತಗೊಂಡಿವೆ. ಆರ್ಥಿಕತೆ ಹಳಿಗೆ ಮರಳುತ್ತಿದೆ ಎನ್ನುವಾಗಲೇ ಬಿಸಿ ಗಾಳಿಯು ಅದಕ್ಕೆ ಅಡ್ಡಿಯೊಡ್ಡಿದೆ. ವಿದ್ಯುತ್ ಉತ್ಪಾದನೆಗೆ ಅತಿಹೆಚ್ಚಾಗಿ ಬಳಕೆಯಾಗುತ್ತಿರುವ ಕಲ್ಲಿದ್ದಲಿಗೂ ಬೇಡಿಕೆ ಹೆಚ್ಚಿದೆ.

ಗೋಧಿ ಉತ್ಪಾದನೆ ಕುಸಿತ:

ತಾಪಮಾನವು ಕೃಷಿ ಉತ್ಪಾದನೆಯ ಮೇಲೂ ಕರಿನೆರಳು ಚೆಲ್ಲಿದೆ. ಗೋಧಿ ಉತ್ಪಾದನೆಯ ಮುಖ್ಯ ರಾಜ್ಯವಾಗಿರುವ ಪಂಜಾಬ್‌ನಲ್ಲಿ ಈ ಬಾರಿ ಫಸಲು ಕಡಿಮೆಯಾಗಿದೆ. 2021ರ ಇದೇ ಅವಧಿಗೆ ಹೋಲಿಸಿದರೆ, ಶೇ 20ರಷ್ಟು ಗೋಧಿ ಉತ್ಪಾದನೆ ಕುಸಿದಿದೆ ಎಂದು ತಜ್ಞರು ಹೇಳಿದ್ದಾರೆ. ಮಧ್ಯಪ್ರದೇಶ, ಚಂಡೀಗಡ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲೂ ಗೋಧಿ ಉತ್ಪಾದನೆ ಮೇಲೆ ಬಿಸಿ ಗಾಳಿಯ ಪ್ರಭಾವವಿದೆ.

ಜಗತ್ತಿಗೆ ಅತಿಹೆಚ್ಚು ಗೋಧಿಯನ್ನು ಪೂರೈಸುವ ರಷ್ಯಾ–ಉಕ್ರೇನ್ ಯುದ್ಧದಲ್ಲಿ ತೊಡಗಿರುವುದು, ಜಾಗತಿಕ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಇದನ್ನು ಸರಿದೂಗಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಜೊತೆಗಿನ ಇತ್ತೀಚಿನ ಸಭೆಯಲ್ಲಿ ಹೇಳಿದ್ದರು. ಆದರೆ ಗೋಧಿ ಉತ್ಪಾದನೆ ಕುಂಠಿತಗೊಂಡಿದ್ದು, ಪೂರೈಕೆ ಕೊರತೆ ನೀಗಿಸಲು ಮುಂದಾಗಿದ್ದ ಭಾರತದ ಉದ್ದೇಶಕ್ಕೆ ಹೊಡೆತ ನೀಡಿದೆ.

ಯುದ್ಧದಿಂದ ಉಂಟಾಗಿರುವ ಗೋಧಿ ಪೂರೈಕೆ ಕೊರತೆಯನ್ನು ನೀಗಿಸಲು ಭಾರತ ನಿರ್ಧರಿಸಿದ್ದರೂ, ತಾಪಮಾನ ಹೆಚ್ಚಳದ ಕಾರಣಕ್ಕೆ, ತನ್ನ ದೇಶೀಯ ಬೇಡಿಕೆಯನ್ನು ಪೂರೈಸಿಕೊಳ್ಳಲೂ ಸರ್ಕಾರಕ್ಕೆ ಕಷ್ಟವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2021–22ರ ಆರ್ಥಿಕ ವರ್ಷದಲ್ಲಿ 87 ಲಕ್ಷ ಟನ್ ಉತ್ಪಾದನೆ ಕುಸಿದಿದೆ ಎಂದು ದತ್ತಾಂಶಗಳು ಹೇಳುತ್ತವೆ.

ಆರೋಗ್ಯದ ಮೇಲೆ ಪರಿಣಾಮ

ತಾಪಮಾನ ಹೆಚ್ಚಳ ಅಥವಾ ಬಿಸಿ ಗಾಳಿಯು ಜನರ ಆರೋಗ್ಯವನ್ನು ಕೆಡಿಸುತ್ತದೆ. ಮುಖ್ಯವಾಗಿ ನಿರ್ಜಲೀಕರಣ ಕಾಡಬಹುದು. ಬಿಸಿಲಿಗೆ ಒಡ್ಡಿಕೊಂಡವರಲ್ಲಿ ಊತ, ತಲೆನೋವು, ವಾಕರಿಕೆ, ಸುಸ್ತು, ವಾಂತಿ, ಬೆವರು ಕಾಣಿಸಿಕೊಳ್ಳಬಹುದು. ಇದರ ಜೊತೆ ಜ್ವರ (102 ಡಿಗ್ರಿ ಫ್ಯಾರನ್‌ಹೀಟ್‌) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ ಅಂದರೆ, 104 ಡಿಗ್ರಿ ಫ್ಯಾರನ್‌ಹೀಟ್ ದಾಟಿದರೆ, ಪ್ರಜ್ಞೆ ಹೋಗುವ ಅಪಾಯವೂ ಇದೆ. ಕೋಮಾಕ್ಕೂ ಹೋಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ

ಮುನ್ನೆಚ್ಚರಿಕೆ ಕ್ರಮಗಳು

l ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಸೂರ್ಯನ ಬಿಸಿಲಿಗೆ ಹೋಗಬಾರದು

l ಬಾಯಾರಿಕೆ ಇಲ್ಲದಿದ್ದರೂ, ಯಥೇಚ್ಛ ನೀರು ಕುಡಿಯಬೇಕು

l ಹೊರಗೆ ಹೋಗಬೇಕೆಂದಿದ್ದರೆ, ಹಗುರವಾದ ಹಾಗೂ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು

l ಹೊರಗಡೆ ಕೆಲಸ ಮಾಡುವವರು ತಲೆ, ಕುತ್ತಿಗೆ, ಮುಖ ಹಾಗೂ ಕೈಕಾಲು ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು

l ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡುವ ಕನ್ನಡಕ, ಟೋಪಿ, ಛತ್ರಿ ಬಳಸಬೇಕು

l ನಿರ್ಜಲೀಕರಣಕ್ಕೆ ಕಾರಣವಾಗಬಹುದಾದ ಮದ್ಯ, ಕಾಫಿ, ಟೀ, ಕಾರ್ಬೊನೇಟೆಡ್ ಪಾನೀಯಗಳಿಂದ ದೂರವಿರಬೇಕು

l ಹೆಚ್ಚು ಪ್ರೊಟೀನ್‌ಭರಿತ ಆಹಾರ, ಹಳಸಿದ ಆಹಾರ ಸೇವಿಸಬಾರದು

l ಒಆರ್‌ಎಸ್, ಮನೆಯಲ್ಲಿ ತಯಾರಿಸಿದ ಲಸ್ಸಿ, ಮಜ್ಜಿಗೆ, ನಿಂಬೆ ಶರಬತ್ತು ಕುಡಿಯಬೇಕು

l ನಿಲುಗಡೆ ಮಾಡಿರುವ ವಾಹನಗಳಲ್ಲಿ ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಬಿಡಬಾರದು

l ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಮನೆಯನ್ನು ತಂಪಾಗಿರಿಸಬೇಕು. ಗಾಳಿಯಾಡುವಂತೆ ರಾತ್ರಿಹೊತ್ತು ಕಿಟಕಿಗಳನ್ನು ತೆರೆದಿಡಬೇಕು

l ಆರೋಗ್ಯ ಕೆಟ್ಟರೆ ವೈದ್ಯರನ್ನು ಸಂಪರ್ಕಿಸಬೇಕು

ಆಧಾರ: ಹವಾಮಾನ ಇಲಾಖೆ, ಸ್ಕೈಮೇಟ್, ಬಿಬಿಸಿ, ವಿಶ್ವ ಆರೋಗ್ಯ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT