ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ

Published 5 ಆಗಸ್ಟ್ 2024, 0:47 IST
Last Updated 5 ಆಗಸ್ಟ್ 2024, 0:47 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶ ರಾಜ್ಯದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆಯು 13ಕ್ಕೆ ಏರಿಕೆ ಆಗಿದೆ. ಮಂಡಿ ಜಿಲ್ಲೆಯಲ್ಲಿ ಇಬ್ಬರ ಮೃತದೇಹಗಳು ಸಿಕ್ಕಿವೆ.

40ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಪತ್ತೆಯಾದ ಮೃತದೇಹಗಳಲ್ಲಿ ಮೂರು ತಿಂಗಳ ಹಸುಳೆ ಮಾನ್ವಿಯ ಮೃತದೇಹವೂ ಸೇರಿದೆ.

ನಾಪತ್ತೆಯಾಗಿರುವವರನ್ನು ಪತ್ತೆ ಮಾಡಲು ಡ್ರೋನ್, ಶ್ವಾನದಳ ಬಳಸಿ ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ. ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ ಸೇರಿದಂತೆ ವಿವಿಧ ಏಜೆನ್ಸಿಗಳ ಒಟ್ಟು 410 ಮಂದಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಶ್ರೀನಗರ–ಲೇಹ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ: ಶ್ರೀನಗರ (ಪ್ರಜಾವಾಣಿ ವರದಿ): ಮೇಘಸ್ಫೋಟದ ನಂತರ ಅಲ್ಲಲ್ಲಿ ಮಣ್ಣು ಕುಸಿತ ಆಗಿರುವುದರಿಂದ ಶ್ರೀನಗರ–ಲೇಹ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ಮಧ್ಯ ಕಾಶ್ಮೀರದ ಗಂದೇರ್‌ಬಲ್‌ ಪ್ರದೇಶದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಣ್ಣು ಕುಸಿತ ಉಂಟಾಗಿದೆ ಎಂದಿದ್ದಾರೆ. 

‘ರಸ್ತೆಯಲ್ಲಿನ ವಾಹನಗಳನ್ನು ತೆರವುಗೊಳಿಸುವುದು ನಮ್ಮ ಆದ್ಯತೆ. ಮಣ್ಣು ಕುಸಿತದಿಂದಾಗಿ ತೊಂದರೆಗೆ ಸಿಲುಕಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು, ಖಾಸಗಿ ಸಂಸ್ಥೆಗಳವರು ಈ ಕೆಲಸಗಳಿಗೆ ಕೈಜೋಡಿಸಿದ್ದಾರೆ. ಲೇಹ್‌–ಲಡಾಖ್ ಪ್ರವಾಸ ಕೈಗೊಂಡಿರುವವರು ಹಾಗೂ ಅಮರನಾಥ ಯಾತ್ರೆಗೆ ಬಂದಿರುವವರು ಮುಂದಿನ ಆದೇಶದವರೆಗೆ ಕಾಯಬೇಕಿದೆ’ ಎಂದು ಗಂದೇರ್‌ಬಲ್‌ನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಗುಲ್ಜಾರ್ ಅಹಮದ್ ಮಾಹಿತಿ ನೀಡಿದ್ದಾರೆ. 

ಬೆಟ್ಟದ ದೇಗುಲದಲ್ಲಿ ಸಿಲುಕಿದ್ದ 8 ಮಂದಿ ರಕ್ಷಣೆ
ಶಿವಪುರಿ, ಮಧ್ಯಪ್ರದೇಶ (ಪಿಟಿಐ): ನದಿಯ ನೀರಿನ ಮಟ್ಟ ಏರಿದ ನಂತರ ಇಲ್ಲಿನ ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ಸಿಲುಕಿದ್ದ 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು. ‘ಇಲ್ಲಿನ ಪೋಹ್ರಿ ಪಟ್ಟಣದಲ್ಲಿರುವ ಕೇದಾರೇಶ್ವರ ದೇವಾಲಯಕ್ಕೆ ತೆರಳಿದ್ದ ವೇಳೆ 8 ಮಂದಿ ಸಿಲುಕಿಕೊಂಡಿದ್ದರು. ರಾಜ್ಯ ವಿಪತ್ತು ರಕ್ಷಣಾ ಪಡೆಯು ಸ್ಥಳಕ್ಕೆ ಧಾವಿಸಿ, ರಾತ್ರಿ 10 ಗಂಟೆ ವೇಳೆಗೆ ಎಲ್ಲರನ್ನೂ ರಕ್ಷಣೆ ಮಾಡಿದೆ’ ಎಂದು  ಹಿರಿಯ ಪೊಲೀಸ್‌ ಅಧಿಕಾರಿ ಸುರ್ಜಿತ್‌ ಸಿಂಗ್‌ ತಿಳಿಸಿದರು.

ಪುಣೆ, ನಾಸಿಕ್‌ನಲ್ಲಿ ಭಾರಿ ಮಳೆ

ಮುಂಬೈ: ಮಹಾರಾಷ್ಟ್ರದ ಪುಣೆ ಮತ್ತು ನಾಸಿಕ್‌ ಜಿಲ್ಲೆಗಳಲ್ಲಿ ನಿರಂತರ ಮಳೆ ಮುಂದುವರೆದಿದ್ದು, ಭಾರಿ ಪ್ರಮಾಣದ ನೀರನ್ನು ಭಾನುವಾರ ಗೋದಾವರಿ ನದಿಗೆ ಬಿಡಲಾಗಿದೆ.  

ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಗೋದಾ ಘಾಟ್‌ನಲ್ಲಿ ಗೋದಾವರಿ ನದಿಯ ದಡದಲ್ಲಿರುವ ಅನೇಕ ದೇವಾಲಯಗಳು ನೀರಿನಲ್ಲಿ ಮುಳುಗಿವೆ.

ಪುಣೆಯಲ್ಲಿ ಖಡಕ್ವಾಸ್ಲಾ ಅಣೆಕಟ್ಟಿನಿಂದ ಮುಲಾ-ಮುತಾ ನದಿಗೆ ನೀರು ಬಿಡಲಾಗುತ್ತಿರುವ ಹಿನ್ನಲೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ವಿಪತ್ತು ನಿರ್ವಹಣಾ ಸೇವೆಗಳಿಗೆ ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT