ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಬಿಕ್ಕಟ್ಟು | ಒತ್ತಡ ತಂತ್ರಗಳು ಸರ್ಕಾರವನ್ನು ಉಳಿಸಲಾರವು: ಪಕ್ಷೇತರ ಶಾಸಕ

Published 3 ಮಾರ್ಚ್ 2024, 10:43 IST
Last Updated 3 ಮಾರ್ಚ್ 2024, 10:43 IST
ಅಕ್ಷರ ಗಾತ್ರ

ಶಿಮ್ಲಾ: ತಮ್ಮ ಉದ್ಯಮ ಸಂಸ್ಥೆಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ವ್ಯರ್ಥ ತಂತ್ರಗಳಿಂದ ಹಿಮಾಚಲ ಪ್ರದೇಶ ಸರ್ಕಾರವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರು ಪಕ್ಷೇತರ ಶಾಸಕರು ಗುಡುಗಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ನಲಗಢ ಕ್ಷೇತ್ರದ ಪಕ್ಷೇತರ ಶಾಸಕ ಕೆ.ಎಲ್‌.ಠಾಕೂರ್‌ ಅವರು, 'ಮುಖ್ಯಮಂತ್ರಿಯವರು ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ಹಿಮಾಚಲ ಪ್ರದೇಶ ಹಿಂದೆಂದೂ ಇಂತಹ ರಾಜಕಾರಣವನ್ನು ಕಂಡಿಲ್ಲ' ಎಂದು ಕಿಡಿಕಾರಿದ್ದಾರೆ.

'ನಾನು ಈ ಹಿಂದೆ ಬಿಜೆಪಿ ಶಾಸಕನಾಗಿದ್ದೆ. ಸಾಕಷ್ಟು ವರ್ಷಗಳಿಂದ ಆ ಪಕ್ಷದೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ನಾನು ನನ್ನ ಚಿಂತನೆಗೆ ಅನುಸಾರವಾಗಿ ಮತ ಚಲಾಯಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಳಿಕ, ಕಾಂಗ್ರೆಸ್‌ ಬಂಡಾಯ ಶಾಸಕ ಲಾಹೌಲ್‌ ಮತ್ತು ಸ್ಪಿಟಿ ಶಾಸಕ ರವಿ ಠಾಕೂರ್‌ ಅವರ ಮನೆಗಳಿಗೆ ತೆರಳುವ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದೂ ಪಕ್ಷೇತರ ಶಾಸಕರು ಆರೋಪಿಸಿದ್ದಾರೆ.

ಇಂತಹ ಒತ್ತಡ ತಂತ್ರಗಳಿಂದ ಪಕ್ಷೇತರ ಶಾಸಕರ ಉದ್ಯಮಗಳು ಮತ್ತು ಕುಟುಂಬಗಳಿಗೆ ಪೆಟ್ಟು ಬಿದ್ದಿದೆ. ಆದರೆ, ಈ ತಂತ್ರಗಳು ಸರ್ಕಾರವನ್ನು ಉಳಿಸುವುದಿಲ್ಲ ಎಂದು ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

ಶಾಸಕರ ಪ್ರತಿಕೃತಿ ದಹನ, ಉದ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸುವ ಮೂಲಕ ಸರ್ಕಾರವು ಕೆಟ್ಟ ಮಾದರಿಯನ್ನು ರೂಪಿಸಿದೆ. ಮುಖ್ಯಮಂತ್ರಿಯಾದವರು ಇಂತಹ ಸೇಡಿನ ಮನೋಭಾವ ಬೆಳೆಸಿಕೊಳ್ಳಬಾರದು. ಪ್ರತೀಕಾರ ಧೋರಣೆಯನ್ನು ಬಿಡಬೇಕು ಎಂದು ದೆಹ್ರಾ ಶಾಸಕ ಹೊಶಿಯಾರ್‌ ಸಿಂಗ್‌ ಆಗ್ರಹಿಸಿದ್ದಾರೆ.

'ನಾವು ನಮ್ಮಿಷ್ಟದಂತೆ ಮತದಾನ ಮಾಡುವ ಹಕ್ಕು ಹೊಂದಿದ್ದೇವೆ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಮತ ಚಲಾಯಿಸಿದ್ದೇವೆ' ಎಂದು ಪ್ರತಿಪಾದಿಸಿರುವ ಅವರು, ಕಾಂಗ್ರೆಸ್‌ ಸರ್ಕಾರದ ಕ್ರಮಗಳನ್ನು ಖಂಡಿಸಿದ್ದಾರೆ.

'ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಒಂದೇ ಒಂದು ಕಾಮಗಾರಿ ನಡೆದಿಲ್ಲ' ಎಂದೂ ದೂರಿದ್ದಾರೆ.

ಅಡ್ಡಮತದಾನದ ಬಳಿಕ ಸರ್ಕಾರಕ್ಕೆ ಆತಂಕ
ಹಿಮಾಚಲ ವಿಧಾನಸಭೆಯು 68 ಸದಸ್ಯ ಬಲವನ್ನು ಹೊಂದಿದೆ. ಇಲ್ಲಿನ ಏಕೈಕ ರಾಜ್ಯಸಭೆ ಸ್ಥಾನಕ್ಕೆ ಫೆಬ್ರುವರಿ 27ರಂದು ನಡೆದ ಚುನಾವಣೆಗೂ ಮುನ್ನ ಕಾಂಗ್ರೆಸ್‌ 40 ಹಾಗೂ ಬಿಜೆಪಿ 25 ಶಾಸಕರನ್ನು ಹೊಂದಿದ್ದವು. ಉಳಿದ ಮೂವರು ಪಕ್ಷೇತರ ಶಾಸಕರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಆರು ಮಂದಿ ಸೇರಿದಂತೆ, ಪಕ್ಷೇತರ ಶಾಸಕರಾದ ಕೆ.ಎಲ್‌. ಠಾಕೂರ್‌, ಹೊಶಿಯಾರ್‌ ಸಿಂಗ್ ಹಾಗೂ ಆಶಿಶ್‌ ಶರ್ಮಾ (ಹಮೀರ್‌ಪುರ) ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್‌ ಪರ ಮತ ಹಾಕಿದ್ದರು. ಹೀಗಾಗಿ ಕಾಂಗ್ರೆಸ್‌ ಬಲ 34ಕ್ಕೆ ಕುಸಿದಿತ್ತು. ಪಕ್ಷೇತರರು ಹಾಗೂ ಕಾಂಗ್ರೆಸ್‌ ಬಂಡಾಯ ಶಾಸಕರ ಬೆಂಬಲದೊಂದಿಗೆ ಬಿಜೆಪಿಯೂ ತನ್ನ ಸಂಖ್ಯೆಯನ್ನು ಕಾಂಗ್ರೆಸ್‌ಗೆ ಸಮಗೊಳಿಸಿತ್ತು. ನಂತರ ಚೀಟಿ ಎತ್ತಿದಾಗ ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಗ್ವಿಗೆ ಅದೃಷ್ಟ ಕೈಕೊಟ್ಟಿತ್ತು.

ಇದರ ಬೆನ್ನಲ್ಲೇ ಸಿಎಂ ಸುಖ್ವಿಂದರ್‌ ಸಿಂಗ್‌ ಸುಖು ನೇತೃತ್ವದ ಸರ್ಕಾರ ಪತನಗೊಳ್ಳುವ ಆತಂಕವೂ ಎದುರಾಗಿತ್ತು. ಆದರೆ, ರಾಜ್ಯದ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಮಂಡನೆ ವೇಳೆ ಸರ್ಕಾರದ ಪರ ಮತದಾನ ಮಾಡಬೇಕೆಂಬ ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪದಲ್ಲಿ ಕಾಂಗ್ರೆಸ್‌ನ 6 ಮಂದಿ ಬಂಡಾಯ ಶಾಸಕರನ್ನು ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಟಾನಿಯಾ ಅನರ್ಹಗೊಳಿಸಿದ್ದರು.

ಹೀಗಾಗಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 40 ರಿಂದ 32ಕ್ಕೆ ಮತ್ತು ವಿಧಾನಸಭೆ ಸದಸ್ಯ ಬಲ 68ರಿಂದ 62ಕ್ಕೆ ಕುಸಿದಿದೆ. ಇದರೊಂದಿಗೆ ಸುಖು ಅವರು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT