ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೃಹ ಸಚಿವಾಲಯದ ಕಾರ್ಯವೈಖರಿ: ಚರ್ಚೆಗೆ ಪಟ್ಟುಹಿಡಿಯಲು ‘ಇಂಡಿಯಾ’ ಸಿದ್ಧತೆ

Published : 3 ಆಗಸ್ಟ್ 2024, 14:52 IST
Last Updated : 3 ಆಗಸ್ಟ್ 2024, 14:52 IST
ಫಾಲೋ ಮಾಡಿ
Comments

ನವದೆಹಲಿ: ಗೃಹ ಸಚಿವ ಅಮಿತ್‌ ಶಾ ಅವರ ಸಚಿವಾಲಯದ ಕಾರ್ಯವೈಖರಿ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಮುಂದಿಟ್ಟಿರುವ ಬೇಡಿಕೆಯನ್ನು ನಿರಾಕರಿಸಲಾಗಿದೆ. ಆದರೆ, ಇದೇ ವಿಷಯವನ್ನು ಸೋಮವಾರದ ಕಲಾಪದಲ್ಲಿ ಮತ್ತೆ ಪ್ರಸ್ತಾಪಿಸಲು ‘ಇಂಡಿಯಾ’ ಸಿದ್ಧತೆ ನಡೆಸಿದೆ.

ಗೃಹ ಸಚಿವಾಲಯದ ಬದಲು ಅಮಿತ್‌ ಶಾ ನಿರ್ವಹಿಸುತ್ತಿರುವ ಮತ್ತೊಂದು ಖಾತೆಯಾದ ಸಹಕಾರ ಸಚಿವಾಲಯದ ಕುರಿತು ಸೋಮವಾರದ ಕಲಾಪದಲ್ಲಿ ಚರ್ಚಿಸಲು ರಾಜ್ಯಸಭೆಯ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್ ಅವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಚರ್ಚೆಗೆ ಉತ್ತರ ನೀಡಿದ ನಂತರ ಸಹಕಾರ ಸಚಿವಾಲಯದ ವಿಷಯ ಚರ್ಚೆಗೆ ಬರಲಿದೆ.

‘ಇಂಡಿಯಾ’ದ ಬೇಡಿಕೆ ತಿರಸ್ಕರಿಸಿರುವುದನ್ನು ಸೋಮವಾರದ ಕಲಾಪದಲ್ಲಿ ಬಲವಾಗಿ ಖಂಡಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದರು. ರಾಜ್ಯಸಭೆಯ ನಿರ್ಧಾರವನ್ನು ಖಂಡಿಸಿ ಸಭಾಪತಿ ಜಗದೀಪ್‌ ಧನಕರ್‌ ಅವರಿಗೆ ಮತ್ತೊಮ್ಮೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಗೃಹ ಸಚಿವಾಲಯದ ಕಾರ್ಯ ವೈಖರಿ ಕುರಿತ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಮತ್ತು ಬಿಜೆಡಿ ಗುರುವಾರ ಧನಕರ್ ಅವರಿಗೆ ಪತ್ರ ಬರೆದಿದ್ದವು.

ಟಿಎಂಸಿ ನಾಯಕ ಡೆರಿಕ್‌ ಒಬ್ರಿಯಾನ್‌ ಅವರು, ‘ರಾಜ್ಯಸಭೆಯಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯವೈಖರಿ ಕುರಿತು ಚರ್ಚೆ ನಡೆಸುವಂತೆ ಕೋರಿದ್ದೆವು. ಆದರೆ, ಚರ್ಚೆಯಿಂದ ಸರ್ಕಾರ ದೂರ ಸರಿದಿದೆ’ ಎಂದು ಹೇಳಿದರು.

ವಿರೋಧ ಪಕ್ಷಗಳು ಸೋಮವಾರದ ಕಲಾಪದಲ್ಲಿ ಮಣಿಪುರ ಹಿಂಸಾಚಾರ, ಜಮ್ಮು–ಕಾಶ್ಮೀರದಲ್ಲಿ ಉಗ್ರರ ದಾಳಿ, ಜನಗಣತಿ–2021ರ ವಿಳಂಬ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಬಗ್ಗೆ ಚರ್ಚಿಸಲು ಪಟ್ಟು ಹಿಡಿಯಲಿವೆ ಎಂದು ಮೂಲಗಳು ತಿಳಿಸಿವೆ.

ವಯನಾಡ್ ಭೂಕುಸಿತ ವಿಚಾರವಾಗಿ ಸದನದ ದಾರಿ ತಪ್ಪಿಸಿದ ಆರೋಪದ ಮೇಲೆ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ. ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲೂ ಸಿದ್ಧತೆ ನಡೆಸಿದೆ ಎಂದು ತಿಳಿಸಿವೆ. 

ಲೋಕಸಭೆಯಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ವಸತಿ ಮತ್ತು ನಗರಾಭಿವೃದ್ಧಿ, ಮೀನುಗಾರಿಕೆ, ಪಶುಸಂಗೋಪನೆ ಸಚಿವಾಲಯಗಳ ಬಗ್ಗೆ ಚರ್ಚೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT