ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆ ತುಳಿತದಿಂದ ಸಾವು | ಸಂತ್ರಸ್ತರ ಕುಟುಂಬಕ್ಕೆ ಬೇಗ ಪರಿಹಾರ ನೀಡಿ: ಸಂಸದ ರಾಹುಲ್

ಕಾಡುಪ್ರಾಣಿಗಳ ದಾಳಿಗೆ ಮೃತಪಟ್ಟವರ ಕುಟುಂಬಸ್ಥರ ಭೇಟಿಯಾದ ಸಂಸದ ರಾಹುಲ್
Published 18 ಫೆಬ್ರುವರಿ 2024, 16:03 IST
Last Updated 18 ಫೆಬ್ರುವರಿ 2024, 16:03 IST
ಅಕ್ಷರ ಗಾತ್ರ

ವಯನಾಡ್: ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಹುಡುಕುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಘಟನೆಯ ಕುರಿತು ಜಿಲ್ಲೆಯ ಅಧಿಕಾರಿಗಳಿಂದ ರಾಹುಲ್ ಗಾಂಧಿ ವಿವರಣೆಯನ್ನು ಪಡೆದರು. ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಯನಾಡ್‌ಗೆ ಭಾನುವಾರ ಅವರು ಭೇಟಿ ನೀಡಿ ಈ ಮಾಹಿತಿ ಪಡೆದರು. 

ಕೆಲ ದಿನಗಳಿಂದ ಆನೆ ದಾಳಿಯಿಂದ ಮೃತಪಟ್ಟ ಮೂವರ ಕುಟುಂಬಸ್ಥರಿಗೆ ವಿಳಂಬ ಮಾಡದೆ, ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಕುಟುಂಬವು ಒಬ್ಬ ಸದಸ್ಯನನ್ನು ಕಳೆದುಕೊಂಡಾಗ ವಿಶೇಷವಾಗಿ ಬಡ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಅಂಥ ಕುಟುಂಬಕ್ಕೆ ಹಣದ ಅವಶ್ಯಕತೆ ಇರುವುದರಿಂದಾಗಿ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದರು. 

ಮಾನವ–ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಶಾಶ್ವತ ಪರಿಹಾರ ಹುಡುಕಬೇಕು ಎಂದು ಒತ್ತಾಯಿಸಿ ಸ್ಥಳೀಯರು ಶನಿವಾರ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯನ್ನು ವಾರಾಣಸಿಯಲ್ಲಿ ಮೊಟಕುಗೊಳಿಸಿದ ಅವರು, ತಾವು ಪ್ರತಿನಿಧಿಸುವ ಕ್ಷೇತ್ರ ವಯನಾಡ್‌ಗೆ ಬಂದರು.  

ಕಲ್ಪೆಟ್ಟದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಮಾನವ–ವನ್ಯಜೀವಿ ಸಂಘರ್ಷದ ವಿಚಾರದಿಂದ ವಿಷಯಾಂತರ ಮಾಡಲು ಬಯಸುವುದಿಲ್ಲ ಎಂದರು. 

‘ವಯನಾಡ್ ವೈದ್ಯಕೀಯ ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆ ಇದ್ದು, ಇದು ಗಂಭೀರ ವಿಚಾರವಾಗಿದೆ. ವೈದ್ಯಕೀಯ ಕಾಲೇಜಿನ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸ ತ್ವರಿತವಾಗಿ ಏಕೆ ಮುಗಿಯುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಇದು ಜಟಿಲವಾದ ಸಮಸ್ಯೆಯಂತೂ ಅಲ್ಲ. ಈ ಭಾಗದ ಜನರು ವೈದ್ಯಕೀಯ ಸೌಲಭ್ಯವಿಲ್ಲದೆ ಮೃತಪಡುತ್ತಿದ್ದಾರೆ. ಅಲ್ಲದೆ, ಗಾಯಾಳುಗಳಾಗುತ್ತಿದ್ದರೂ, ಯೋಗ್ಯ ವೈದ್ಯಕೀಯ ಕಾಲೇಜು ಇಲ್ಲದೆ ಇರುವುದು ದುರಂತವೇ ಸರಿ’ ಎಂದು ಬೇಸರ ವ್ಯಕ್ತಪಡಿಸಿದರು. 

ವೈದ್ಯಕೀಯ ಕಾಲೇಜಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. 

ಇದಕ್ಕೂ ಮುನ್ನ ಎರಡು ತಿಂಗಳ ಅವಧಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟ ಅಜಿ, ಪಾಲ್ ಮತ್ತು ಪ್ರಜೀಶ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. 

‘ಕೆಲವೇ ಉದ್ಯಮಿಗಳ ಪರ ಮೋದಿ ಸರ್ಕಾರ ಕೆಲಸ’:

‘ಕೆಲವೇ ಕೆಲವು ಉದ್ಯಮಿಗಳ ಪರ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಲಿತರು ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ ಸಮುದಾಯಗಳನ್ನು ನಿರ್ಲಕ್ಷಿಸಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.  ಕೇರಳದ ವಯನಾಡ್‌ನಿಂದ ವಾಪಸ್ ಬಂದ ರಾಹುಲ್ ಅವರು ಗಾಂಧಿ ಮನೆತನದ ಸ್ವರಾಜ್ ಭವನದಿಂದ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಮುಂದುವರಿಸಿದರು. ಈ ವೇಳೆ ರೋಡ್ ಶೋನಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.  ಉತ್ತರ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು ‘ಯುವ ಜನಾಂಗವನ್ನು ವಂಚಿಸಲಾಗುತ್ತಿದೆ’ ಎಂದು ದೂರಿದರು. ವಿಶ್ವವಿದ್ಯಾಲಯಗಳ ಹಂತದಲ್ಲಿ ವಿದ್ಯಾರ್ಥಿಗಳ ಸಂಘಟನೆಗಳಿಗೆ ಚುನಾವಣೆ ನಡೆಯಬೇಕು ಎಂದು ಪ್ರತಿಪಾದಿಸಿದರು.  ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಚಿಂತಿಸುವ ಬದಲಿಗೆ ಉದ್ಯಮಿಗಳ ಪರ ವಹಿಸಿದ್ದಾರೆ. ಅವರು (ಬಿಜೆಪಿ ಸರ್ಕಾರ) ನಿಮಗೆ (ವಿದ್ಯಾರ್ಥಿಗಳಿಗೆ) ಶಿಕ್ಷಣ ಪಡೆಯಲು ಸಾಲ ನೀಡುವುದಿಲ್ಲ. ಆದರೆ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಲಾಗುತ್ತದೆ. ಇದೇ ಕಾರಣಕ್ಕೆ ನಮ್ಮ ಯಾತ್ರೆಗೆ ನ್ಯಾಯ ಎಂದು ಹೆಸರಿಡಲಾಗಿದೆ ಎಂದರು.  ದೇಶದಲ್ಲಿ ಒಬಿಸಿ ದಲಿತರು ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಶೇ 73ರಷ್ಟು ಜನರಿದ್ದಾರೆ. ಆದರೆ ಈ ಸಮುದಾಯಗಳು ಸರ್ಕಾರದ ಅಜೆಂಡಾದಲ್ಲಿ ಇಲ್ಲ. ದೇಶದ 200 ಅತ್ಯುನ್ನತ ಕಂಪನಿಗಳ ಪೈಕಿ ಒಂದು ಕಂಪನಿಯ ಮಾಲೀಕ ಈ ಸಮುದಾಯದವರಲ್ಲ.  ಶೇ 73ರಷ್ಟಿರುವ ಈ ಜನರು ಎಲ್ಲಿಯೂ ಕಾಣುವುದಿಲ್ಲ. ಈ ಸಮುದಾಯಗಳು ದೇಶವನ್ನು ನಿಯಂತ್ರಿಸುವುದು ಬಿಜೆಪಿಗೆ ಬೇಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.  ಈ ವೇಳೆ ಯುವ ಸಮುದಾಯದ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ನಿಲ್ಲಲಿ ಎಂಬಿತ್ಯಾದಿ ಘೋಷ ವಾಕ್ಯಗಳಿರುವ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ರೋಡ್ ಶೋ ವೇಳೆ ಮನೆಯ ಮಾಳಿಗೆ ಮೇಲೆ ನಿಂತಿದ್ದ ಜನರು ರಾಹುಲ್ ಗಾಂಧಿ ಅವರ ಮೇಲೆ ಹೂವಿನ ಸುರಿಮಳೆಗೈದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT