ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಎನ್‌ಕೌಂಟರ್ | ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ

Last Updated 12 ಡಿಸೆಂಬರ್ 2019, 7:34 IST
ಅಕ್ಷರ ಗಾತ್ರ

ನವದೆಹಲಿ: ‘ದಿಶಾ’ ಪ್ರಕರಣದ (ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಪ್ರಕರಣ)ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಕೊಂದಪೊಲೀಸರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಿದೆ.

ಸುಪ್ರೀಂ ಕೋರ್ಟ್‌ನನಿವೃತ್ತ ನ್ಯಾಯಮೂರ್ತಿ ವಿ.ಎಸ್.ಸಿರ್‌ಪುರಕ್ ವಿಚಾರಣಾ ಆಯೋಗದ ನೇತೃತ್ವ ವಹಿಸಲಿದ್ದಾರೆ. ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾದ ರೇಖಾ, ಸಿಬಿಐ ಮಾಜಿ ನಿರ್ದೇಶಕ ಕಾರ್ತಿಕೇಯನ್ ಆಯೋಗದ ಸದಸ್ಯರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹೈದರಾಬಾದ್‌ನಿಂದ ಹೊರಗೆ ಆಯೋಗದ ಕಚೇರಿ ಇರಬೇಕು.6 ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

‘ತನ್ನ ಮುಂದಿನ ಆದೇಶದವರೆಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇನ್ಯಾಯಾಲಯ ಅಥವಾ ಪ್ರಾಧಿಕಾರ ತನಿಖೆ ನಡೆಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರಿಂದಾಗಿ ತೆಲಂಗಾಣ ಸರ್ಕಾರ ರಚಿಸಿದ್ದ 8 ಸದಸ್ಯರ ವಿಶೇಷ ತನಿಖಾ ದಳ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆರಂಭಿಸಿದ್ದ ವಿಚಾರಣೆಗಳಿಗೆ ತಡೆ ಬೀಳಲಿದೆ.

‘ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಾಲ್ವರು ಆರೋಪಿಗಳ ಎನ್‌ಕೌಂಟರ್‌ ಸಾವಿಗೆ ಸಂಬಂಧಿಸಿದಂತೆಯಾವುದೇ ಪೂರ್ವಗ್ರಹವಿಲ್ಲದ, ಪಕ್ಷಪಾತ ರಹಿತ ವಿಚಾರಣೆ ನಡೆಯಬೇಕಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ’ ಎಂದು ನ್ಯಾಯಮೂರ್ತಿ ಎಸ್.ಎ.ನಜೀರ್ ಮತ್ತು ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಪೊಲೀಸರು ತಪ್ಪು ಮಾಡಿದ್ದಾರೆ ಎಂದು ನಾವು ಹೇಳುತ್ತಿಲ್ಲ. ಆದರೆ ನಿಜವಾಗಿ ಏನಾಯಿತು ಎಂಬುದು ನಮಗಿನ್ನೂ ಗೊತ್ತಾಗಿಲ್ಲ. ಹೀಗಾಗಿ ನಾವು ವಿಚಾರಣೆಗೆ ಆದೇಶಿಸುತ್ತಿದ್ದೇವೆ. ನೀವು ಸಹಕರಿಸಬೇಕು. ತೆಲಂಗಾಣ ಸರ್ಕಾರ ಹೇಳುತ್ತಿರುವ ಕೆಲ ಸಂಗತಿಗಳ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ’ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ಹಿನ್ನೆಲೆ

ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಹೈದರಾಬಾದ್‌ ಪಶುವೈದ್ಯೆಯನ್ನು ನ.27ರ ರಾತ್ರಿ ಕಾಮುಕರು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದ ಆಕೆಯ ಶರೀರ ನ.28ರಂದು ಪತ್ತೆಯಾಗಿತ್ತು.

ದೇಶದಾದ್ಯಂತ ವ್ಯಾಪಕ ಆಕ್ರೋಶ ಹುಟ್ಟುಹಾಕಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆಹೈದರಾಬಾದ್ ಪೊಲೀಸರುಆರೋಪಿಗಳಾದ ಮೊಹಮ್ಮದ್‌ ಆಲಿ, ಜೊಲ್ಲು ಶಿವ, ಜೊಲ್ಲು ನವೀನ್‌ ಕುಮಾರ್‌, ಚೆನ್ನಕೇಶವಲು ಅವರನ್ನು ಬಂಧಿಸಿದ್ದರು.

ಮಹಜರು ನಡೆಸಲು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಾಗ ತಮ್ಮ ಮೇಲೆಯೇ ಹಲ್ಲೆ ಮಾಡಿದರು ಎಂದು ಡಿ.6ರಂದು ಈ ಎಲ್ಲರನ್ನೂ ಪೊಲೀಸರುಎನ್‌ಕೌಂಟರ್‌ ಮಾಡಿದ್ದರು. ಪೊಲೀಸರ ಕ್ರಮ ದೇಶದಲ್ಲಿ ಪರ–ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು.

ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರು ವಿಫಲರಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲು ನಕಲಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಆರೋಪಿಸಿ ವಕೀಲರಾದ ಜಿ.ಎಸ್. ಮಣಿ ಎಂಬುವರು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು.

ಎನ್‌ಕೌಂಟರ್ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇಮಕ ಸಂಬಂಧ ಗುರುವಾರ (ಡಿ.12) ಸುಪ್ರೀಂ ಕೋರ್ಟ್ ಆದೇಶ ನೀಡುತ್ತದೆ. ಅವರುದೆಹಲಿಯಿಂದಲೇ ಕೆಲಸ ಮಾಡುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನಿನ್ನೆ (ಡಿ.11) ಹೇಳಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT