ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂನ ಶಂಕರದೇವರ ಜನ್ಮಸ್ಥಳ ಭೇಟಿಗೆ ತಡೆ: ರಾಹುಲ್ ಗಾಂಧಿ ಅಸಮಾಧಾನ

Published 22 ಜನವರಿ 2024, 10:53 IST
Last Updated 22 ಜನವರಿ 2024, 10:53 IST
ಅಕ್ಷರ ಗಾತ್ರ

ನಾಗಾಂವ್‌ (ಅಸ್ಸಾಂ): ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ವೈಷ್ಣವ ಸನ್ಯಾಸಿ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಹೋಗುತ್ತಾರೆ. ಆದರೆ ನಾನು ಮಾತ್ರ ಹೋಗಬಾರದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ಹೊರ ಹಾಕಿದರು.

ಶಂಕರದೇವರ ಜನ್ಮಸ್ಥಳಕ್ಕೆ ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ಮಾರ್ಗ ಮಧ್ಯೆ ಹೈಬರ್ಗಾಂವ್‌ನಲ್ಲಿ ತಡೆಹಿಡಿಯಲಾಯಿತು. ಇದನ್ನು ವಿರೋಧಿಸಿ ರಾಹುಲ್‌ ಗಾಂಧಿ, ಹಿರಿಯ ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರೊಂದಿಗೆ ಅಲ್ಲಿಯೇ ಧರಣಿ ನಡೆಸಿದರು. ಪಕ್ಷದ ಸಂಸದ ಗೌರವ್‌ ಗೊಗೊಯ್‌ ಮತ್ತು ಬಟದ್ರಾವ ಶಾಸಕ ಸಿಬಾಮೋನಿ ಬೋರಾ ಅವರು ರಾಹುಲ್ ಗಾಂಧಿ ಪರವಾಗಿ ಶಂಕರದೇವರ ಜನ್ಮಸ್ಥಳಕ್ಕೆ ತೆರಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ‘ನಾನು ಶಂಕರದೇವರ ತತ್ವಶಾಸ್ತ್ರವನ್ನು ನಂಬುತ್ತೇನೆ. ಅಲ್ಲದೆ, ನಾವು ಜನರನ್ನು ಒಗ್ಗೂಡಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ, ದ್ವೇಷವನ್ನು ಹರಡುವುದರಲ್ಲಿ ಅಲ್ಲ’ ಎಂದು ಹೇಳಿದರು.

‘ಶಂಕರದೇವರು ನಮಗೆ ಗುರುವಿನಂತೆ. ಅವರು ನಮ್ಮ ಮಾರ್ಗದರ್ಶಕರು. ಹಾಗಾಗಿ ನಾನು ಅಸ್ಸಾಂಗೆ ಭೇಟಿ ನೀಡಿದಾಗ ಅವರಿಗೆ ನನ್ನ ನಮನಗಳನ್ನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದೆ. ಜನವರಿ 11ರಂದು ಶಂಕರದೇವರ ಜನ್ಮಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನ ಬಂದಿತ್ತು. ಆದರೆ, ಈಗ ಭೇಟಿ ನೀಡುವುದರಿಂದ ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾಗುವ ಪರಿಸ್ಥಿತಿ ಇದೆ ಎಂದು ಹೇಳಿದ್ದರು’ ಎಂದು ರಾಹುಲ್‌ ಗಾಂಧಿ ಹೇಳಿದರು.

‘ಇದು ವಿಚಿತ್ರವಾಗಿದೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆ. ಗೌರವ್‌ ಗೊಗೊಯ್‌ ಮತ್ತು ಎಲ್ಲರೂ ಹೋಗಬಹುದು ಆದರೆ ರಾಹುಲ್‌ ಗಾಂಧಿ ಮಾತ್ರ ಹೋಗುವಂತಿಲ್ಲ’ ಎಂದು ಅವರು ಆರೋಪಿಸಿದರು.

‘ನನ್ನ ಭೇಟಿ ನಿರಾಕರಣೆಗೆ ಕೆಲವು ಕಾರಣ ಇರಬಹುದು. ನನಗೆ ಅದು ತಿಳಿದಿಲ್ಲ. ನನಗೆ ಅವಕಾಶ ಸಿಕ್ಕಾಗ ನಾನು ಬಟದ್ರವಕ್ಕೆ ಹೋಗುತ್ತೇನೆ. ಅಸ್ಸಾಂ ಮತ್ತು ಇಡೀ ರಾಷ್ಟ್ರವು ಶಂಕರದೇವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂಬುದು ನನ್ನ ನಂಬಿಕೆ’ ಎಂದು ರಾಹುಲ್‌ ಗಾಂಧಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT