ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಗಂಟೆಗಳಲ್ಲಿ ಓಮೈಕ್ರಾನ್‌ ಪತ್ತೆ ಮಾಡುವ ಕಿಟ್‌: ಐಸಿಎಂಆರ್‌ ಅಭಿವೃದ್ಧಿ

Last Updated 12 ಡಿಸೆಂಬರ್ 2021, 3:14 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ ಹೊಸ ತಳಿ ಓಮೈಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕಿತರ ಮಾದರಿಗಳಿಂದ ಕೆಲವೇ ಗಂಟೆಗಳಲ್ಲಿ ಓಮೈಕ್ರಾನ್‌ ಪತ್ತೆ ಮಾಡುವ ಕಿಟ್‌ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅಭಿವೃದ್ಧಿ ಪಡಿಸಿದೆ.

ಈಶಾನ್ಯ ಪ್ರಾಂತ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ವಿಜ್ಞಾನಿಗಳ ತಂಡವು ಪರೀಕ್ಷೆಯ ಕಿಟ್‌ ಅಭಿವೃದ್ಧಿ ಪಡಿಸಿದೆ. ಸಂಗ್ರಹಿಸಿದ ಮಾದರಿಯಲ್ಲಿ ಓಮೈಕ್ರಾನ್‌ ವೈರಾಣು ತಳಿ ಇರುವಿಕೆಯನ್ನು ಈ ಕಿಟ್‌ ಮೂಲಕ ಎರಡು ಗಂಟೆಗಳಲ್ಲಿ ಪತ್ತೆ ಮಾಡಲು ಸಾಧ್ಯವಿದೆ. ವಿಜ್ಞಾನಿ ಡಾ.ಬಿಸ್ವಜ್ಯೋತಿ ಬೊರ್ಕಕೋತಿ ಅವರ ನೇತೃತ್ವದಲ್ಲಿ ಕಿಟ್‌ ಅಭಿವೃದ್ಧಿಯಾಗಿರುವುದಾಗಿ ವರದಿಯಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಓಮೈಕ್ರಾನ್‌ ಸೋಂಕು ಪತ್ತೆಯಾಗಿರುವುದು ವರದಿಯಾಗಿವೆ. ದೇಶದಲ್ಲಿ ಒಟ್ಟು 33 ಓಮೈಕ್ರಾನ್‌ ಪ್ರಕರಣಗಳಿವೆ.

'ಡಿಬ್ರೂಗಡದ ಐಸಿಎಂಆರ್‌–ಆರ್‌ಎಂಆರ್‌ಸಿ ಓಮೈಕ್ರಾನ್‌ ತಳಿಯ ಪತ್ತೆಗಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ಕಿಟ್‌ ಅನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿ ಪಡಿಸಿದೆ. ಹೊಸ ತಳಿಯನ್ನು ಈ ಕಿಟ್‌ 2 ಗಂಟೆಗಳ ಒಳಗಾಗಿ ಪತ್ತೆ ಮಾಡುತ್ತದೆ' ಎಂದು ವಿಜ್ಞಾನಿ ಡಾ.ಬಿಸ್ವಜ್ಯೋತಿ ಹೇಳಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೋಲ್ಕತ್ತ ಮೂಲದ ಜಿಸಿಸಿ ಬಯೋಟೆಕ್‌ ಕಂಪನಿಯು ಕಿಟ್‌ ತಯಾರಿಸುತ್ತಿದೆ. ಶೇಕಡ 100ರಷ್ಟು ನಿಖರವಾಗಿ ಫಲಿತಾಂಶ ದೊರೆತಿರುವುದು ಪರಿಶೀಲನೆಗಳಿಂದ ತಿಳಿದಿರುವುದಾಗಿ ಹೇಳಿದ್ದಾರೆ.

ಬಿಸ್ವಜ್ಯೋತಿ ನೇತೃತ್ವದ ವಿಜ್ಞಾನಿಗಳ ತಂಡವು ಕಳೆದ ವರ್ಷ ಜುಲೈನಲ್ಲಿ ಕೊರೊನಾ ವೈರಸ್‌ ಅನ್ನು ಯಶಸ್ವಿಯಾಗಿ ಪ್ರತ್ಯೇಕಿಸಿತ್ತು. ದೇಶದಲ್ಲಿ ಆ ಸಾಧನೆ ಮಾಡಿದ ಸರ್ಕಾರದ ಮೂರನೇ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಡಿಬ್ರೂಗಡದ ಐಸಿಎಂಆರ್‌–ಆರ್‌ಎಂಆರ್‌ಸಿ ಪಾತ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT