ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವ್ಯಕ್ತಿಯಿಂದಲೂ ಸಾಧನೆ ಸಾಧ್ಯ: ಇಸ್ರೊ ವಿಜ್ಞಾನಿ ವೀರಮುತ್ತುವೇಲ್‌

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಇಸ್ರೊ ವಿಜ್ಞಾನಿ ವೀರಮುತ್ತುವೇಲ್‌ ಭಾಷಣದ ಹಳೆ ವಿಡಿಯೊ
Published 24 ಆಗಸ್ಟ್ 2023, 16:03 IST
Last Updated 24 ಆಗಸ್ಟ್ 2023, 16:03 IST
ಅಕ್ಷರ ಗಾತ್ರ

ಚೆನ್ನೈ: ‘ಶಾಲಾ ದಿನಗಳಲ್ಲಿ ಸಾಧಾರಣ ಬುದ್ಧಿಮತ್ತೆ ವಿದ್ಯಾರ್ಥಿಯಾಗಿದ್ದ ನಾನು ಸರಳ ಜೀವನ ನಡೆಸುತ್ತಿರುವ ವ್ಯಕ್ತಿ. ಜೀವನದಲ್ಲಿ ಸಾಧನೆ ಮಾಡಲು ನನ್ನಂಥವನಿಗೆ ಸಾಧ್ಯವಾಗಿರುವಾಗ, ಉನ್ನತ ಸಾಧನೆ ಪ್ರತಿಯೊಬ್ಬರಿಗೂ ಸಾಧ್ಯವಾಗಲಿದೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ...’

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೆಲ ತಿಂಗಳು ಹಿಂದೆ ಮಾತನಾಡಿದ್ದ ಇಸ್ರೊ ವಿಜ್ಞಾನಿ ಪಿ.ವೀರಮುತ್ತುವೇಲ್ ಅವರ ಈ ಮಾತುಗಳಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವೀರಮುತ್ತುವೇಲ್‌ ಅವರ ಮಾಜಿ ಸಹೋದ್ಯೋಗಿ, ಚಂದ್ರಯಾನ–1ರ ಯೋಜನಾ ನಿರ್ದೇಶಕರೂ ಆಗಿದ್ದ ಮೈಲಸ್ವಾಮಿ ಅಣ್ಣಾದೊರೈ ಅವರು ಕಳೆದ ವರ್ಷ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಕ್ಕೆ ವೀರಮುತ್ತುವೇಲ್‌ ಅವರನ್ನು ಆಹ್ವಾನಿಸಿದ್ದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮಿಳಿನಲ್ಲಿ ಮಾಡಿದ್ದ ಭಾಷಣದ ಮೂರು ನಿಮಿಷಗಳ ವಿಡಿಯೊವನ್ನು ಈಗ ನೂರಾರು ಜನರು ಹಂಚಿಕೊಂಡಿದ್ದಾರೆ.

‘ನನಗೆ ವೃತ್ತಿ ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. 10ನೇ ತರಗತಿ ನಂತರ ವಿಲ್ಲುಪುರಂನಲ್ಲಿ ಡಿಪ್ಲೊಮಾ ಕೋರ್ಸ್‌ಗೆ ಸೇರಿದೆ. ಎಂಜಿನಿಯರಿಂಗ್‌ ಅಧ್ಯಯನದ ಬಗ್ಗೆ ಅತೀವ ಆಸಕ್ತಿ ಇದ್ದ ಕಾರಣ, ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಶೇ 90ರಷ್ಟು ಅಂಕ ಗಳಿಸಿ, ಚೆನ್ನೈನ ಸಾಯಿರಾಂ ಎಂಜಿನಿಯರಿಂಗ್‌ ಕಾಲೇಜು ಸೇರಿದೆ. ಪದವಿಯ ಎಲ್ಲ ಸೆಮಿಸ್ಟರ್‌ಗಳಲ್ಲೂ ಅತ್ಯಧಿಕ ಅಂಕ ಗಳಿಸಿದೆ’ ಎಂದು ವಿವರಿಸಿದ್ದಾರೆ.

‘ಕೆಲ ಕಾಲ ಕೊಯಮತ್ತೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. ಇಸ್ರೊ ಸೇರಬೇಕು ಎಂಬ ಉತ್ಕಟ ಬಯಕೆ ಹೊಂದಿದ್ದೆ. ಕೊನೆಗೂ ಇಸ್ರೊ ಸೇರಿದೆ. ಹಲವಾರು ಯೋಜನೆಗಳಡಿ ಕೆಲಸ ಮಾಡುವ ಜೊತೆಗೆ, ‘ವೈಬ್ರೇಷನ್ ಅಂಡ್‌ ಸಪ್ರೆಷನ್ ಆಫ್‌ ಎಲೆಕ್ಟ್ರಾನಿಕ್ ಪ್ಯಾಕೇಜ್‌ ಇನ್‌ ಸೆಟಲೈಟ್‌’ ಎಂಬ ವಿಷಯದ ಮೇಲೆ ಐಐಟಿ–ಮದ್ರಾಸ್‌ನಿಂದ ಪಿಎಚ್‌.ಡಿ ಪದವಿ ಪಡೆದೆ’ ಎಂಬುದಾಗಿ ಹೇಳಿರುವುದು ವಿಡಿಯೊದಲ್ಲಿದೆ.

ಪ್ರತಿಯೊಬ್ಬರು ತಮಗೆ ಒದಗಿಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಸ್ತು ಕಠಿಣ ಶ್ರಮ ಹಾಗೂ ಪ್ರತಿಫಲ ಅಪೇಕ್ಷಿಸದೇ ದುಡಿದರೆ ಯಶಸ್ಸು ನಿಶ್ಚಿತ
ಪಿ.ವೀರಮುತ್ತುವೇಲ್ ಇಸ್ರೊ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT