ಲಖನೌ: ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಹಿರಿಯ ಸಹಪಾಠಿಯಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯು, ದೂರು ನೀಡಲು ಪೊಲೀಸ್ ಠಾಣೆಗೆ 16 ದಿನ ಅಲೆದಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹತಾಶೆಗೊಂಡ ಮಹಿಳೆಯು ಬಟ್ಟೆಯನ್ನು ಭಾಗಶಃ ಹರಿದುಕೊಂಡು ರಸ್ತೆ ಮೇಲೆ ಪ್ರತಿಭಟನೆ ನಡೆಸಿದ ನಂತರ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ, ಐಐಟಿ ವಿದ್ಯಾರ್ಥಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿಯನ್ನು ಶಿವಾಂಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಐಐಟಿ ಜಮ್ಮುನಲ್ಲಿ ಎಂ.ಟೆಕ್ ಓದುತ್ತಿದ್ದಾನೆ.
ಸಂತ್ರಸ್ತೆಯು ಲಖನೌ ನಿವಾಸಿಯಾಗಿದ್ದು, ‘ಕೆಲ ದಿನಗಳ ಹಿಂದೆ ಶಿವಾಂಶ್ ಕಾರಿನಲ್ಲಿ ಅತ್ಯಾಚಾರ ನಡೆಸಿ, ಬಳಿಕ ರಸ್ತೆಗೆ ಎಸೆದು ಹೋಗಿದ್ದ’ ಎಂದು ಆರೋಪಿಸಿದ್ದಾರೆ.
ಅತ್ಯಾಚಾರ ನಡೆದಿದೆ ಎನ್ನಲಾದ ದಿನ ಆರೋಪಿಯ ಲೊಕೇಷನ್ ಜಮ್ಮುನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಅದಕ್ಕಾಗಿ ಸಂತ್ರಸ್ತೆ ಸತತ 16 ದಿನ ಪ್ರಯತ್ನ ನಡೆಸಿದ್ದರು. ಈ ಮಧ್ಯೆ ಸಂತ್ರಸ್ತೆಗೆ ಮಾನಸಿಕ ಕಾಯಿಲೆ ಇದೆ ಎಂದು ಆಕೆಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೂ ಪೊಲೀಸರು ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದರಿಂದ ಹತಾಶೆಗೊಂಡ ಸಂತ್ರಸ್ತೆ ಬಟ್ಟೆಯನ್ನು ಭಾಗಶಃ ಹರಿದುಕೊಂಡು ರಸ್ತೆ ಮಧ್ಯೆ ಪ್ರತಿಭಟಿದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪ್ರಕರಣ ದಾಖಲಿಸಿಕೊಂಡು ಶಿವಾಂಶ್‌ನನ್ನು ಬಂಧಿಸಿದ್ದಾರೆ ಎಂದು ಹೇಳಿವೆ.
ಕೃತ್ಯ ನಡೆದಿದೆ ಎನ್ನಲಾದ ದಿನ ಆರೋಪಿಯು ಕ್ಯಾಂಪಸ್‌ನಲ್ಲಿ ಇದ್ದನೇ ಎಂದು ಜಮ್ಮು ಐಐಟಿಯಿಂದ ಪೊಲೀಸರು ಮಾಹಿತಿ ಕೇಳಿದ್ದಾರೆ. ಸಿ.ಸಿ.ಟಿ.ವಿ ದೃಶ್ಯ ಮತ್ತು ಹಾಜರಾತಿ ವಿವರ ನೀಡುವಂತೆಯೂ ಕೇಳಿದ್ದಾರೆ.