‘ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗ (ಡಬ್ಲ್ಯುಸಿಸಿಬಿ) ನೀಡಿದ ಮಾಹಿತಿ ಮೇರೆಗೆ ಪ್ರಾದೇಶಿಕ ಅರಣ್ಯ ಕಚೇರಿ ತಂಡಗಳು ಗುಮನಪುರ ಮತ್ತು ಘಂಟಾಘರ್ ನಗರಗಳ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿವೆ. ಈ ವೇಳೆ ವನ್ಯಜೀವಿಗಳ ಅಂಗಾಂಗಗಳಾದ ಆಮೆಯ ದೇಹದ ಭಾಗಗಳು, ಜಿಂಕೆ ಕೊಂಬುಗಳು, ಹಲ್ಲಿಯ ಜನನಾಂಗ ಮತ್ತು ನರಿ ಚರ್ಮಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ಆಚರಣೆಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಇಟ್ಟುಕೊಂಡು ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
‘ಅಂಗಡಿಗಳಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಡಬ್ಲ್ಯುಸಿಸಿಬಿ ಅಧಿಕಾರಿಗಳು ನಿಗಾ ವಹಿಸಿದ್ದರು. ಈ ಕುರಿತು ಬುಧವಾರ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು’ ಎಂದು ಕೋಟದ ವನ್ಯಜೀವಿ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ (ಎಸಿಎಫ್) ಅನುರಾಗ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಾಪಾರಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.