ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಣ್‌ನಲ್ಲಿ ಸಂಘರ್ಷ, ಗುಂಡೇಟಿಗೆ ಒಬ್ಬ ಬಲಿ

Published 21 ಮೇ 2024, 16:01 IST
Last Updated 21 ಮೇ 2024, 16:01 IST
ಅಕ್ಷರ ಗಾತ್ರ

ಪಟ್ನಾ: ಮತದಾನ ನಡೆದ ನಂತರದಲ್ಲಿ ಸಾರಣ್‌ನಲ್ಲಿ ನಡೆದ ಸಂಘರ್ಷದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರಿಗೆ ಗುಂಡೇಟು ತಗುಲಿ ಗಾಯಗಳಾಗಿವೆ.

ಅಲ್ಲಿ ಈಗ  ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಜಿಲ್ಲಾ ಕೇಂದ್ರ ಛಪರಾದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರಣ್‌ನಲ್ಲಿ ಸೋಮವಾರ ಮತದಾನ ನಡೆದಿದ್ದು, ಶೇಕಡ 52ರಷ್ಟು ಮತದಾನ ಆಗಿದೆ.

ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದ ಸಮಯದಲ್ಲಿ ಛಪರಾದಲ್ಲಿ ಗಲಾಟೆ ಶುರುವಾಯಿತು. ಇಲ್ಲಿನ ಆರ್‌ಜೆಡಿ ಅಭ್ಯರ್ಥಿ, ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಇಲ್ಲಿನ ಮತಗಟ್ಟೆಯೊಂದಕ್ಕೆ ಭೇಟಿ ನೀಡಿ, ಅಲ್ಲಿ ಕೆಲವರು ನಿಂತಿದ್ದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಎದುರಾಳಿ ಬಿಜೆಪಿಯ ಬೆಂಬಲಿಗರಲ್ಲಿ ಕೆಲವರು ರೋಹಿಣಿ ಅವರ ಬಗ್ಗೆ ಕೆಟ್ಟ ಮಾತು ಆಡಿದರು ಎನ್ನಲಾಗಿದೆ.

ಪರಿಸ್ಥಿತಿ ವಿಷಮಗೊಳ್ಳುವ ಮೊದಲೇ ರೋಹಿಣಿ ಅವರು ಅಲ್ಲಿಂದ ನಡೆದರು. ಆಗ ಪರಿಸ್ಥಿತಿ ಶಾಂತಗೊಂಡಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಮತ್ತೆ ಗಲಾಟೆ ಶುರುವಾಯಿತು. ಆರಂಭದಲ್ಲಿ ಮಾತಿಗೆ ಸೀಮಿತವಾಗಿದ್ದ ಗಲಾಟೆಯು, ನಂತರ ಮುಷ್ಟಿ ಕಾಳಗಕ್ಕೆ ತಿರುಗಿತು. ಒಂದು ಗುಂಪಿನ ಕಡೆಯವರು ಗುಂಡು ಹಾರಿಸಿದರು. ಗುಂಡೇಟು ತಗುಲಿ ಗಂಭೀರ ಗಾಯಗಳಾಗಿದ್ದ ಚಂದನ್ ಕುಮಾರ್ (26) ಎನ್ನುವವರು ಮೃತ‍ಪಟ್ಟರು. ಗಂಭೀರ ಗಾಯಗಳಾಗಿರುವ ಇನ್ನಿಬ್ಬರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.

ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಪಟ್ನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ‘ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಇಂಟರ್ನೆಟ್ ಸೇವೆಗಳನ್ನು ಎರಡು ದಿನಗಳಮಟ್ಟಿಗೆ ಸ್ಥಗಿತಗೊಳಿಸಲಾಗಿದೆ’ ಎಂದು ಸಾರಣ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಲಾ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಇಬ್ಬರು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಸಾರಣ್ ಲೋಕಸಭಾ ಕ್ಷೇತ್ರದಲ್ಲಿ ರೋಹಿಣಿ ಅವರು ಬಿಜೆಪಿಯ ರಾಜೀವ್ ಪ್ರತಾಪ್ ರೂಢಿ ಅವರ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಮೋತಿಹಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಧಾಮೋಹನ್ ಸಿಂಗ್ ಅವರ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಭೇಟಿ ನೀಡಿದ ದಿನವೇ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT