ನವದೆಹಲಿ: ಗುಜರಾತ್‌ನ ಗೋಧ್ರಾದಲ್ಲಿ 2002ರಲ್ಲಿ ನಡೆದಿದ್ದ ರೈಲಿಗೆ ಬೆಂಕಿ ಹಚ್ಚಿದ್ದ ಕೃತ್ಯದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮೂವರು ಅಪರಾಧಿಗಳ ಜಾಮೀನು ಅರ್ಜಿಯನ್ನು ಈ ಹಂತದಲ್ಲಿ ವಿಚಾರಣೆಗೆ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿತು.
‘ಈ ಕೃತ್ಯ ತುಂಬಾ ಗಂಭೀರವಾದ ಪ್ರಕರಣ. ಒಬ್ಬ ವ್ಯಕ್ತಿಯ ಸಾವಿಗೆ ಸಂಬಂಧಿಸಿದ ಪ್ರತ್ಯೇಕವಾದ ಪ್ರಕರಣವಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಮೂವರು ಸದಸ್ಯರ ಪೀಠವು ಸೋಮವಾರ ಅಭಿಪ್ರಾಯಪಟ್ಟಿತು.
ಆದರೆ, ಈ ಅರ್ಜಿಯ ವಿಚಾರಣೆಗೆ ಸಮ್ಮತಿಸಿತು. ‘ಸದ್ಯದ ಸ್ಥಿತಿಯಲ್ಲಿ ಜಾಮೀನು ಮಂಜೂರು ಮಾಡಲಾಗದು’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿತು.
ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಮತ್ತು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಪ್ರಾಥಮಿಕ ವಾದವನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್‌ನ ಪೀಠವು ಈ ಸಂಬಂಧ ಆದೇಶ ಹೊರಡಿಸಿತು.
‘ಮೂವರು ಅಪರಾಧಿಗಳ ಮೇಲೆ ಕೇವಲ ಕಲ್ಲು ತೂರಾಟದ ಆರೋಪವಷ್ಟೇ ಇಲ್ಲ. ರೈಲ್ವೆ ಬೋಗಿಗೆ ಬೆಂಕಿ ಹಚ್ಚಿದ್ದ ಕೃತ್ಯದಲ್ಲಿ ಒಬ್ಬನು ಸಕ್ರಿಯವಾಗಿ ಭಾಗವಹಿಸಿರುವುದು ದೃಢಪಟ್ಟಿದೆ’ ಎಂದು ಮೆಹ್ತಾ ಅವರು ಪೀಠದ ಗಮನಕ್ಕೆ ತಂದರು.
ಅರ್ಜಿದಾರರ ಪರ ಪ್ರತಿನಿಧಿಸಿದ್ದ ವಕೀಲ ಹೆಗ್ಡೆ, ‘ಅಪರಾಧಿಗಳು 17 ವರ್ಷವನ್ನು ಜೈಲಿನಲ್ಲಿ ಕಳೆದಿದ್ದಾರೆ. ಇಬ್ಬರ ವಿರುದ್ಧ ಕಲ್ಲು ತೂರಾಟ ಮಾಡಿದ ಆರೋಪವಷ್ಟೇ ಇದ್ದರೆ, ಒಬ್ಬನ ವಿರುದ್ಧ ಪ್ರಯಾಣಿಕರ ಆಭರಣವನ್ನು ದೋಚಿರುವ ಆರೋಪವಿದೆ’ ಎಂದು ತಿಳಿಸಿದರು.
‘ಕೃತ್ಯದಲ್ಲಿ ಈ ಮೂವರ ವಿರುದ್ಧದ ಅಪರಾಧವು ನಿರ್ದಿಷ್ಟವಾಗಿ ಇರುವುದರಿಂದ ಈಗಿನ ಹಂತದಲ್ಲಿ ವ್ಯಕ್ತಿಗತವಾಗಿ ಜಾಮೀನು ಮಂಜೂರು ಮಾಡಲಾಗದು. ಆದರೆ, ಈ ನಿರ್ಧಾರವು ಮನವಿಯನ್ನು ಸಲ್ಲಿಸುವ ಅರ್ಜಿದಾರರ ಹಕ್ಕಿನ ಮೇಲೆ ಪರಿಣಾಮ ಬೀರದು‘ ಎಂದು ಪೀಠ ಹೇಳಿತು.
ಅಲ್ಲದೆ, ಈ ಅರ್ಜಿಯನ್ನು ಅನಿರ್ದಿಷ್ಟ ಅವಧಿಗೆ ಬಾಕಿ ಉಳಿಸಲು ಆಗದಿರುವ ಕಾರಣ ಪೀಠವೊಂದರಲ್ಲಿ ವಿಚಾರಣೆ ತೆಗೆದುಕೊಳ್ಳಲು ಅರ್ಜಿಯನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿತು.
ಸುಪ್ರೀಂ ಕೋರ್ಟ್ ಈ ಹಿಂದೆ ಏಪ್ರಿಲ್ 21ರಂದು ಇದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಂಟು ಅಪರಾಧಿಗಳ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿತ್ತು. ‘ಈ ಅಪರಾಧಿಗಳು 17–18 ವರ್ಷದಿಂದ ಜೈಲಿನಲ್ಲಿ ಇದ್ದಾರೆ‘ ಎಂದು ಕಾರಣ ನೀಡಿದ್ದು ಈ ಅರ್ಜಿಗಳ ವಿಚಾರಣೆಗೆ ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿಸಿತ್ತು.
ಆದರೆ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇತರೆ ನಾಲ್ವರಿಗೆ ಸಂಬಂಧಿಸಿದಂತೆ ಪೀಠ ಇದೇ ರಿಯಾಯಿತಿಯನ್ನು ನೀಡಲು ನಿರಾಕರಿಸಿತ್ತು.
ಈ ಹಿಂದೆ ಜಾಮೀನು ಮನವಿಗೆ ಗುಜರಾತ್ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ‘ಮಹಿಳೆಯರು, ಮಕ್ಕಳು ಸೇರಿದಂತೆ 59 ಜನರನ್ನು ಜೀವಂತವಾಗಿ ದಹಿಸಿರುವ ಅಪರೂಪದ ಪ್ರಕರಣ ಇದಾಗಿದೆ’ ಎಂದು ತನ್ನ ವಿರೋಧಕ್ಕೆ ಕಾರಣ ನೀಡಿತ್ತು.
ಡಿಸೆಂಬರ್ 15, 2022ರಂದು ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿಯೊಬ್ಬನಿಗೆ ಈತನ ವಿರುದ್ಧ ಕೇವಲ ಕಲ್ಲು ತೂರಾಟದ ಆರೋಪವಿದೆ ಎಂಬುದರ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.