ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಯಾ’ ಕೂಟ ಕ್ಯಾನ್ಸರ್‌ಗಿಂತ ಕೆಟ್ಟದ್ದು: ನರೇಂದ್ರ ಮೋದಿ

ಉತ್ತರ ಪ್ರದೇಶಲ್ಲಿ ಚುನಾವಣಾ ಪ್ರಚಾರ * ಮೋದಿ ಮಾಡಿದ ಕೆಲಸವನ್ನು ಕಾಂಗ್ರೆಸ್–ಎಸ್‌ಪಿ ರದ್ದು ಪಡಿಸಲಿವೆ: ಪ್ರಧಾನಿ ಆರೋಪ
Published 22 ಮೇ 2024, 16:33 IST
Last Updated 22 ಮೇ 2024, 16:33 IST
ಅಕ್ಷರ ಗಾತ್ರ

ಶ್ರಾವಸ್ತಿ/ಬಸ್ತಿ (ಉತ್ತರ ಪ್ರದೇಶ): ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಅಧಿಕಾರಕ್ಕೆ  ಬಂದರೆ, ಮೋದಿ ಮಾಡಿದ ಕೆಲಸಗಳನ್ನು ರದ್ದು ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. ಇಂಡಿಯಾ ಕೂಟವು ದೇಶಕ್ಕೆ ಕ್ಯಾನ್ಸರ್‌ಗಿಂತ ಕೆಟ್ಟದ್ದು ಎಂದು ಪ್ರತಿಪಾದಿಸಿದರು.

‘ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ ಸಾಧನೆ ಎಂದರೆ, ಸಮಾಜವನ್ನು ಒಡೆದಿದ್ದು ಮತ್ತು ವೋಟ್ ಜಿಹಾದ್ ಮಾಡಿದ್ದು’ ಎಂದು ಟೀಕಿಸಿದರು.

‘ಕಳೆದ ಹತ್ತು ವರ್ಷದಲ್ಲಿ ಮೋದಿ 4 ಕೋಟಿ ಜನರಿಗೆ ಶಾಶ್ವತ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಈಗ ಎಸ್‌ಪಿ ಮತ್ತು ಕಾಂಗ್ರೆಸ್ ಎಲ್ಲವನ್ನೂ ಬದಲಿಸಲು ನಿರ್ಧರಿಸಿವೆ. ಅವರು ನಾಲ್ಕು ಕೋಟಿ ಮನೆಗಳ ಬೀಗದ ಕೈಗಳನ್ನು ನಿಮ್ಮಿಂದ ಕಸಿದುಕೊಂಡು, ಮನೆಗಳನ್ನು ವಶಕ್ಕೆ ಪಡೆಯಲಿದ್ದಾರೆ ಮತ್ತು ಅವನ್ನು ತಮ್ಮ ಮತ ಬ್ಯಾಂಕ್‌ಗೆ ನೀಡಲಿದ್ದಾರೆ’ ಎಂದು ಹೇಳಿದರು.

‘ಅದಷ್ಟೇ ಅಲ್ಲ, ಮೋದಿ 50 ಕೋಟಿಗೂ ಹೆಚ್ಚಿನ ಮಂದಿಗೆ ಜನ್‌ಧನ್ ಖಾತೆಗಳನ್ನು ಆರಂಭಿಸಿದರು. ಅವರು (‘ಇಂಡಿಯಾ’ ಕೂಟ) ನಿಮ್ಮ ಬ್ಯಾಂಕ್ ಖಾತೆಗಳನ್ನು ರದ್ದು ಮಾಡುತ್ತಾರೆ, ಅದರಲ್ಲಿನ ಹಣವನ್ನು ತೆಗೆದುಕೊಳ್ಳುತ್ತಾರೆ. ಮೋದಿ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಅವರು ನಿಮ್ಮ ಮನೆಯ ವಿದ್ಯುತ್ ಸಂ‍ಪರ್ಕ ಕಡಿತಗೊಳಿಸಿ, ಅದನ್ನು ಮತ್ತೆ ಕತ್ತಲುಗೊಳಿಸುತ್ತಾರೆ’ ಎಂದು ಆರೋಪಿಸಿದರು.

‘ನಾನು ಪ್ರತಿ ಮನೆಗೂ ನೀರು ಪೂರೈಸುತ್ತಿದ್ದೇನೆ. ಎಸ್‌‍ಪಿ ಮತ್ತು ಕಾಂಗ್ರೆಸ್ ಮಂದಿ ನಿಮ್ಮ ಮನೆಯ ನಲ್ಲಿಯನ್ನು ಕಿತ್ತೊಯ್ಯುತ್ತಾರೆ. ಅವರು ಅದರಲ್ಲಿ ಪ್ರವೀಣರು’ ಎಂದು ಟೀಕಿಸಿದರು. 

‘ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರ ಮೀಸಲಾತಿ ಕಸಿದುಕೊಂಡು, ಅದನ್ನು ತಮ್ಮ ಮತ ಬ್ಯಾಂಕ್‌ಗೆ ನೀಡಲಿದೆ’ ಎಂದು ಮೋದಿ ಪುನರುಚ್ಚರಿಸಿದರು. 

‘60 ವರ್ಷ ಅವರು ಏನೂ ಮಾಡಲಿಲ್ಲ. ಮೋದಿ ಮತ್ತು ಅವರ ಕೆಲಸವನ್ನು ತಡೆಯಲು ಎಲ್ಲರೂ ಒಟ್ಟಾಗಿದ್ದಾರೆ’ ಎಂದು ಹೇಳಿದರು.     

‘ಹಣ ಪಡೆಯಲು ವೇದಿಕೆಯತ್ತ ನುಗ್ಗಿದ ಜನ‘ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಕೂಟದ ರ್‍ಯಾಲಿಯ ವೇಳೆ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗಿತ್ತು. ಜನ ವೇದಿಕೆ ಸನಿಹಕ್ಕೆ ನುಗ್ಗಲು ಯತ್ನಿಸಿದ್ದರು. ಅದರ ಬಗ್ಗೆ ‍ಪ್ರಧಾನಿ ಮೋದಿ ಲೇವಡಿ ಮಾಡಿದರು. ‘ಎಸ್‌ಪಿ ಮತ್ತು ಕಾಂಗ್ರೆಸ್ ಮುಖಂಡರು ತಮ್ಮ ರ್‍ಯಾಲಿಗಳಿಗೆ ಜನರನ್ನು ಕರೆತರಲು ಗುತ್ತಿಗೆ ನೀಡುತ್ತಾರೆ. ಜನ ಅವರ ಹಣ ಪಡೆಯಲು ವೇದಿಕೆಯತ್ತ ನುಗ್ಗಲು ಯತ್ನಿಸಿದರು’ ಎಂದು ಆರೋಪಿಸಿದರು.

‘56 ಇಂಚು ಎಂದರೆ ಏನು ಎಂದು ಗೊತ್ತಿಲ್ಲವೇ?’

ಬಸ್ತಿ (ಪಿಟಿಐ): ‘ಕಾಂಗ್ರೆಸ್ ಹಾಗೂ ಎಸ್‌ಪಿ ಮುಖಂಡರು ಪಾಕಿಸ್ತಾನದ ಪರ ಸಹಾನುಭೂತಿ ಉಳ್ಳವರು. ಅವರು ಅಣ್ವಸ್ತ್ರದ ಹೆಸರಿನಲ್ಲಿ ಜನರನ್ನು ಹೆದರಿಸುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಆರೋಪಿಸಿದರು. ಉತ್ತರ ಪ್ರದೇಶದ ಬಸ್ತಿಯಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ಒಂದು ಕಾಲದಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತಿದ್ದವರು ಈಗ ಆಹಾರ ಧಾನ್ಯಗಳಿಗಾಗಿ ಪರದಾಡುತ್ತಿದ್ದಾರೆ. ಪಾಕಿಸ್ತಾನ ಮುಗಿದುಹೋಗಿದೆ. ಆದರೆ ಅದರ ಬಗ್ಗೆ ಸಹಾನುಭೂತಿ ಹೊಂದಿರುವ ಎಸ್‌ಪಿ ಮತ್ತು ಕಾಂಗ್ರೆಸ್ ಜನರನ್ನು ಹೆದರಿಸುತ್ತಿವೆ’ ಎಂದು ಆರೋಪಿಸಿದರು. ‘ಪಾಕಿಸ್ತಾನದ ಬಳಿ ಅಣ್ವಸ್ತ್ರ ಇರುವುದರಿಂದ ಅದಕ್ಕೆ ಭಯಪಡಬೇಕು ಎಂದು ಅವರು ಹೇಳುತ್ತಾರೆ. ‘56 ಇಂಚು (ಎದೆ)’ ಎಂದರೆ ಏನು ಎಂದು ಅವರಿಗೆ ಗೊತ್ತಿಲ್ಲವೇ? ಇದು ಕಾಂಗ್ರೆಸ್‌ನ ದುರ್ಬಲ ಸರ್ಕಾರ ಅಲ್ಲ ಮೋದಿಯ ಬಲಿಷ್ಠ ಸರ್ಕಾರ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT