ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಬಾಂಬ್‌ ಮೊರೆಹೋದ ಉಗ್ರರು; ಸಮರವಾದರೆ ಪರಿಣಾಮ ಘನಘೋರ

Last Updated 17 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನ ವಿಶ್ವದಲ್ಲೇ ಅತ್ಯಂತ ದೊಡ್ಡ ಸೇನೆಯನ್ನು ಹೊಂದಿವೆ. ಸೈನಿಕರ ಸಂಖ್ಯೆಯಲ್ಲಿ ಜಗತ್ತಿನ ಇನ್ಯಾವ ದೇಶವೂ ಭಾರತ ಮತ್ತು ಪಾಕಿಸ್ತಾನಕ್ಕೆ ಸಾಟಿಯಿಲ್ಲ. 70 ವರ್ಷಗಳಲ್ಲಿ ಈ ಎರಡೂ ಸೇನೆಗಳು ನಾಲ್ಕು ಬಾರಿ ಮುಖಾಮುಖಿಯಾಗಿವೆ, ಅಂದರೆ ಯುದ್ಧಕ್ಕೆ ನಿಂತಿವೆ. ಆ ಸಶಸ್ತ್ರ ಸಂಘರ್ಷದ ಪರಿಣಾಮವಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಎರಡೂ ಸೇನೆಗಳು ಹಲವು ಭಾರಿ ಮುಖಾಮುಖಿಯಾಗುವುದನ್ನು ತಡೆಹಿಡಿದಿವೆ. ಈಗಿನ ಬಿಗುವಿನ ಸಂದರ್ಭದಲ್ಲಿ ಈ ಸೇನೆಗಳು ಯುದ್ಧಕ್ಕೆ ನಿಂತರೆ, ಅದರ ಪರಿಣಾಮ ಘೋರವಾಗಿರಲಿದೆ. ಎರಡೂ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಹೊಂದಿರುವುದರಿಂದ ಯುದ್ಧದ ಪರಿಣಾಮ ತೀವ್ರವಾಗಿಯೇ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಕೋಲ್ಡ್‌ ಸ್ಟಾರ್ಟ್ ಡಾಕ್ಟ್ರಿನ್’

2001ರಲ್ಲಿ ಭಾರತದ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದ ನಂತರ ಭಾರತ–ಪಾಕ್ ನಡುವೆ ಬಿಗುವಿನ ವಾತಾವರಣ ಉಂಟಾಗಿತ್ತು. ಭಾರತವು ಪಾಕಿಸ್ತಾನದ ಗಡಿಗೆ ಸೇನೆಯನ್ನು ಕಳುಹಿಸಲು ಬರೋಬ್ಬರಿ 27 ದಿನ ಹಿಡಿದಿತ್ತು. ಆದರೆ ಅಷ್ಟರಲ್ಲಾಗಲೇ ಪಾಕಿಸ್ತಾನವು ತನ್ನ ಸೇನೆಯನ್ನು ನಿಯೋಜಿಸಿತ್ತು. ಈಗ ತುರ್ತು ಸಂದರ್ಭದಲ್ಲಿ ಅತ್ಯಂತ ಕ್ಷಿಪ್ರವಾಗಿ ಗಡಿಗೆ ಸೇನೆಯನ್ನು ಕಳುಹಿಸಲು ಸೇನೆಯನ್ನು ಸನ್ನದ್ಧಗೊಳಿಸಲಾಗಿದೆ. ಈ ತಂತ್ರಗಾರಿಕೆಯನ್ನೇ ಕೋಲ್ಡ್‌ ಸ್ಟಾರ್ಟ್ ಡಾಕ್ಟ್ರಿನ್ ಎಂದು ಕರೆಯಲಾಗುತ್ತಿದೆ. ಅದರ ವಿವರಗಳು ಈ ಮುಂದಿನಂತಿವೆ

* ಭಾರತದ ಗಡಿಗೆ ಅತ್ಯಂತ ಸಮೀಪದಲ್ಲಿ ಇರುವ ಸೇನಾ ನೆಲೆಗಳಲ್ಲಿ ಸೈನಿಕರನ್ನು, ಫಿರಂಗಿ ತುಕಡಿ ಮತ್ತು ಟ್ಯಾಂಕ್‌ ತುಕಡಿಗಳನ್ನು ಯುದ್ಧಸನ್ನದ್ಧವಾಗಿ ಇರಿಸಲಾಗಿದೆ

* ಭೂಸೇನೆಗೆ ನೆರವು ಆಗಲೆಂದೇ ಸಮೀಪದ ವಾಯುನೆಲೆಗಳಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ

* ತುರ್ತು ಸಂದರ್ಭಗಳಲ್ಲಿ ಈ ಎಲ್ಲಾ ತುಕಡಿಗಳನ್ನು ಒಂದೇ ಸ್ಥಳದಿಂದ ನಿಯಂತ್ರಿಸಲಾಗುತ್ತದೆ. ಇದಕ್ಕಾಗಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ

* ಯುದ್ಧ ಘೋಷಣೆಯಾದ ಅಥವಾ ಯುದ್ಧಕ್ಕೆ ಆದೇಶ ಸಿಕ್ಕ ನಂತರದ 48 ಗಂಟೆಗಳ ಒಳಗೇ ಸೇನೆಯ ಎಲ್ಲಾ ತುಕಡಿಗಳೂ (ಪಶ್ಚಿಮ ಕಮಾಂಡ್‌ ವಿಭಾಗ) ಪಾಕಿಸ್ತಾನದ ಗಡಿಯಲ್ಲಿ ಇರಲಿವೆ

* ಪಾಕಿಸ್ತಾನವು ಗಡಿಯಲ್ಲಿ ಸೇನೆಯನ್ನು ನಿಯೋಜಿಸುವುದಕ್ಕಿಂತಲೂ ಮೊದಲೇ, ಅದರ ಮೇಲೆ ಭಾರತೀಯ ಸೇನೆ ದಾಳಿ ನಡೆಸಲಿದೆ. ಪಾಕ್‌ ಕಡೆಯಿಂದ ಪ್ರತಿದಾಳಿ ಆರಂಭವಾಗುವುದಕ್ಕೂ ಮೊದಲೇ, ಅದಕ್ಕೆ ಸಾಕಷ್ಟು ಹಾನಿ ಮಾಡಲು ಅವಕಾಶವಿರುತ್ತದೆ

* ಪಾಕಿಸ್ತಾನವು ಯುದ್ಧ ಆರಂಭಿಸುವುದಕ್ಕೂ ಮೊದಲೇ ಅಂತರರಾಷ್ಟ್ರೀಯ ಸಮುದಾಯವು ಕದನ ವಿರಾಮ ಘೋಷಣೆಗೆ ಒತ್ತಾಯಿಸಲಿದೆ. ಪಾಕಿಸ್ತಾನವು ಅಣ್ವಸ್ತ್ರ ಪ್ರಯೋಗಿಸುವುದನ್ನು ಈ ಮೂಲಕ ತಡೆಯಬಹುದು

**
ಪಾಕಿಸ್ತಾನದ ಅಣ್ವಸ್ತ್ರ ಅವಲಂಬನೆ

ಸೇನೆಯ ಗಾತ್ರದಲ್ಲಿ ಪಾಕಿಸ್ತಾನದ ಸಾಮರ್ಥ್ಯವು ಭಾರತದ ಸಾಮರ್ಥ್ಯಕ್ಕಿಂತ ಕಡಿಮೆ. ಹೀಗಾಗಿ ಪಾಕಿಸ್ತಾನವು ಭಾರತದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಯುದ್ಧವನ್ನು ಆರಂಭಿಸಲಾರದು. ಬದಲಿಗೆ ಭಾರತದ ಗಡಿಯುದ್ಧಕ್ಕೂ ಅಲ್ಲಲ್ಲಿ ಸಣ್ಣ ಪ್ರಮಾಣದ ದಾಳಿ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ದಾಳಿಯನ್ನು ತಡೆದು ನಿಲ್ಲಿಸುವಷ್ಟು ಸಾಮರ್ಥ್ಯ ಪಾಕಿಸ್ತಾನದ ಸೇನೆಗೆ ಇಲ್ಲ. ಹೀಗಾಗಿ ಒಂದೊಮ್ಮೆ ಪರಿಸ್ಥಿತಿ ಕೈಮೀರಿದರೆ ಪಾಕಿಸ್ತಾನವು ಅಣ್ವಸ್ತ್ರದ ಮೊರೆ ಹೋಗುವ ಅಪಾಯ ಇದೆ. ಇದು ಹೆಚ್ಚಿನ ಹಾನಿಗೆ ಕಾರಣವಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

**

ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ
ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಚ್ಚಾ ಬಾಂಬ್ ಸ್ಫೋಟದ ಘಟನೆಗಳು ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿವೆ. ಇದೇ ಅವಧಿಯಲ್ಲಿ ಈಶಾನ್ಯ ರಾಜ್ಯಗಳು ಹಾಗೂ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ನಾಡ ಬಾಂಬ್ ಸ್ಫೋಟದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎನ್‌ಎಸ್‌ಜಿಯ ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರ (ಎನ್‌ಬಿಡಿಸಿ) ಮಾಹಿತಿ ನೀಡಿದೆ.

ಎರಡು ವರ್ಷಗಳಲ್ಲಿ 470ಕ್ಕೂ ಹೆಚ್ಚು ಉಗ್ರರು ಮತ್ತು ಇಬ್ಬರು ಪ್ರಮುಖ ಕಮಾಂಡರ್‌ಗಳನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಇದು ಗಡಿಯಾಚೆಗೆ ಇರುವ ಉಗ್ರರ ನಿರ್ವಾಹಕರಲ್ಲಿ ಹತಾಶೆ ಮೂಡಿಸಿದೆ. ಹಾಗಾಗಿ ಉಗ್ರರ ನೈತಿಕ ಸ್ಥೈರ್ಯ ಹೆಚ್ಚಿಸಲು ಅವರು ಏನನ್ನಾದರೂ ಮಾಡಲೇಬೇಕಿತ್ತು. ಭದ್ರತಾ ಪ‍ಡೆಗಳಿಗೆ ಹೆಚ್ಚಿನ ಹಾನಿ ಮಾಡಿ, ದೊಡ್ಡ ಸುದ್ದಿಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಆತ್ಮಹತ್ಯಾ ದಾಳಿ ಮತ್ತು ನಾಡ ಬಾಂಬ್‌ ಸ್ಫೋಟದ ಕಾರ್ಯತಂತ್ರವನ್ನು ಉಗ್ರರ ನಿರ್ವಾಹಕರು ಅಳವಡಿಸಿಕೊಂಡಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ತೊಡಕಾಗಿರುವುದರಿಂದಲೂ ನಾಡಬಾಂಬ್ ಬಳಕೆ ಹೆಚ್ಚಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT