ಶ್ರೀನಗರ: ‘ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಅವರು, ‘ಬಾಂಗ್ಲಾದೇಶಕ್ಕೆ ಇಂದು ಎದುರಾಗಿರುವ ಸ್ಥಿತಿಯೇ ನಮಗೂ ಆಗಲಿದೆ ಎಂದು ಎಲ್ಲ ಸರ್ವಾಧಿಕಾರಿಗಳು ನೆನಪಿಡಬೇಕು’ ಎಂದರು.
ನೆರೆಯ ಬಾಂಗ್ಲಾದೇಶವು ಈಗ ಎದುರಾಗಿರುವ ಸಂಕಷ್ಟದಿಂದ ಹೊರಬರಲಿದೆ ಹಾಗೂ ಭಾರತದ ಜೊತೆಗೆ ಅದರ ಬಾಂಧವ್ಯವು ದೃಢವಾಗಲಿದೆ ಎಂದು ಮಂಗಳವಾರ ಅವರು ಆಶಿಸಿದರು.
‘ಬಾಂಗ್ಲಾದಲ್ಲಿ ಹಲವು ವರ್ಷಗಳಿಂದಲೂ ಅನಿಶ್ಚಿತವಾದ ಪರಿಸ್ಥಿತಿ ಇತ್ತು. ಇದಕ್ಕೆ ಹಲವು ಕಾರಣಗಳಿವೆ. ನಿರುದ್ಯೋಗ ಸಮಸ್ಯೆ ಪ್ರಮುಖ ಕಾರಣವಾಗಿತ್ತು. ದೇಶದ ಆರ್ಥಿಕತೆಯೂ ದುಃಸ್ಥಿತಿಯಲ್ಲಿತ್ತು. ಈ ಎಲ್ಲವೂ ಸೇರಿ ಸರ್ಕಾರದ ಪದಚ್ಯುತಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಶ್ಲೇಷಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣಾ ಆಯೋಗದ ಭೇಟಿ ಕುರಿತ ಪ್ರಶ್ನೆಗೆ, ‘ಅದರಲ್ಲಿ ಹೊಸತೇನಿಲ್ಲ ಅವರು ಬರಲೇಬೇಕು. ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕು. ಅದು ಅವರ ಕೆಲಸ’ ಎಂದು ಪ್ರತಿಕ್ರಿಯಿಸಿದರು.