ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಾಂತ ಪತ್ರಕರ್ತರ ವಿರುದ್ಧ ಕೇಂದ್ರದಿಂದ ಪೆಗಾಸಸ್‌ ಬಳಕೆ: ವರದಿ

Published 28 ಡಿಸೆಂಬರ್ 2023, 16:34 IST
Last Updated 28 ಡಿಸೆಂಬರ್ 2023, 16:34 IST
ಅಕ್ಷರ ಗಾತ್ರ

ನವದೆಹಲಿ: ಹೆಸರಾಂತ ಪತ್ರಕರ್ತರನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಪೆಗಾಸಸ್ ಕುತಂತ್ರಾಂಶ ಬಳಸಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ‘ವಾಷಿಂಗ್ಟನ್ ಪೋಸ್ಟ್’ ಗುರುವಾರ ಪ್ರಕಟಿಸಿರುವ ಜಂಟಿ ತನಿಖಾ ವರದಿಯಲ್ಲಿ ಹೇಳಿವೆ.

‘ದಿ ವೈರ್‌’ನ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮತ್ತು ‘ದಿ ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್‌’ನ (ಒಸಿಸಿಆರ್‌ಪಿ) ಆನಂದ್ ಮಂಗ್ನಾಲೆ ಅವರ ಐಫೋನ್‌ಗಳು ಪೆಗಾಸ್‌ ಕುತಂತ್ರಾಂಶಕ್ಕೆ ಗುರಿಯಾಗಿವೆ ಎಂದು ಆಮ್ನೆಸ್ಟಿ ಹೇಳಿದೆ. 

ಇತ್ತೀಚೆಗೆ ಗುರುತಿಸಲಾದ ಪೆಗಾಸಸ್‌ ಕುತಂತ್ರಾಂಶ ಬಳಕೆಯ ಪ್ರಕರಣವು ಅಕ್ಟೋಬರ್‌ನಲ್ಲಿ ನಡೆದಿದೆ ಎಂದು ಅದು ಹೇಳಿದೆ. ಕೇಂದ್ರ ಸರ್ಕಾರವು ಈ ವರದಿಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

2021ರಲ್ಲಿ ಪತ್ರಕರ್ತರು, ವಿರೋಧ ಪಕ್ಷದ ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ನಿಗಾ ಇಡಲು ಪೆಗಾಸಸ್ ಅನ್ನು ಕೇಂದ್ರ ಬಳಸಿಕೊಂಡಿದೆ. ಸೋರಿಕೆಯಾದ ದಾಖಲೆಗಳ ಪ್ರಕಾರ, ಇದನ್ನು 1,000ಕ್ಕೂ ಹೆಚ್ಚು ಭಾರತೀಯ ಫೋನ್ ಸಂಖ್ಯೆಗಳ ವಿರುದ್ಧ ಬಳಸಲಾಗಿದೆ ಎಂದು ತನಿಖಾ ವರದಿಯಲ್ಲಿ ಆರೋಪಿಸಲಾಗಿದೆ. ಈ ಕುತಂತ್ರಾಂಶದ ಕದ್ದಾಲಿಕೆಗೆ ಗುರಿಯಾದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ ರಾಹುಲ್ ಗಾಂಧಿ ಕೂಡ ಸೇರಿದ್ದಾರೆ.

ಇಸ್ರೇಲ್‌ನ ಎನ್‌ಎಸ್‌ಒ ಸಮೂಹದ ಈ ಕುತಂತ್ರಾಂಶವನ್ನು ಸರ್ಕಾರಗಳು ಅಥವಾ ಭದ್ರತಾ ಏಜೆನ್ಸಿಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಭಾರತ ಸೇರಿದಂತೆ ಹತ್ತಾರು ದೇಶಗಳಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಈ ಕುತಂತ್ರಾಂಶವನ್ನು ವ್ಯಾಪಕವಾಗಿ ಬಳಸಲಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.  

ಪೆಗಾಸಸ್‌ನಿಂದ ಫೋನ್‌ಗೆ ಕನ್ನಹಾಕಿ ಸಂದೇಶಗಳು ಮತ್ತು ಇಮೇಲ್‌ಗಳನ್ನು ಓದಲು, ಫೋಟೋಗಳನ್ನು ವೀಕ್ಷಿಸಲು, ಕರೆಗಳನ್ನು ಕದ್ದಾಲಿಸಲು, ಸ್ಥಳಗಳನ್ನು ಪತ್ತೆ ಮಾಡಲು ಮತ್ತು ಫೋನ್‌ ಹೊಂದಿದವರ ಚಿತ್ರವನ್ನು ಅವರ ಫೋನಿನಲ್ಲಿರುವ ಕ್ಯಾಮೆರಾದಿಂದಲೇ ಚಿತ್ರಿಸಿಕೊಳ್ಳಲು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT