ನವದೆಹಲಿ: ‘ಭಾರತದಲ್ಲಿನ ಸೌರ ವಿದ್ಯುತ್ ಕ್ಷೇತ್ರದಲ್ಲಿ 2024ರ ಜನವರಿಯಿಂದ ಜೂನ್‌ವರೆಗೂ 15 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ. ಇದರ ನಡುವೆಯೇ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಉತ್ಪಾದಕರು ದಾಂಗುಡಿ ಇಟ್ಟಿದ್ದಾರೆ’ ಎಂದು ಮೆರ್‌ಕಾಮ್ ಕ್ಯಾಪಿಟಲ್ ವರದಿ ಹೇಳಿದೆ.
ಈ ಆರು ತಿಂಗಳ ಅವಧಿಯಲ್ಲಿ ಹೆಚ್ಚುವರಿಯಾಗಿ 3.89 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯಾಗಿದೆ. ಇದು ದೇಶದ ಇತಿಹಾಸದಲ್ಲೇ ಮೊದಲು ಎಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯ ಈ ವರದಿಯಲ್ಲಿ ಹೇಳಿದೆ.
‘ವರ್ಷದ ಮೊದಲ ಅರ್ಧದಲ್ಲೇ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹಿಂದೆಂದಿಗಿಂತಲೂ ಹೆಚ್ಚಿನ ದಾಖಲೆ ಮಾಡಿದೆ. ಇದು 2023ರ ಈ ಅವಧಿಗೆ ಹೋಲಿಸಿದಲ್ಲಿ ಶೇ 282ರಷ್ಟು ಹೆಚ್ಚಳವಾಗಿದೆ. ದಾಖಲೆ ಪ್ರಮಾಣದಲ್ಲಿ ಸೌರ ವಿದ್ಯುತ್ ಘಟಕಗಳು ಅನುಷ್ಠಾನಗೊಂಡಿವೆ. ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯ ಈಗ ವೇಗ ಪಡೆದುಕೊಂಡಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘2024ರ ಜೂನ್‌ವರೆಗಿನ ವರದಿಯನ್ನು ಗಮನಿಸಿದರೆ, 87.2 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ದೇಶ ಹೊಂದಿದೆ. ಇದರಲ್ಲಿ ಸೌರ ಘಟಕಗಳ ಪ್ರಮಾಣ ಶೇ 87ರಷ್ಟು ಎಂದು ಅಂದಾಜಿಸಲಾಗಿದೆ. ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸಿದ್ದರ ಪ್ರಮಾಣ ಶೇ 13. ದೇಶದಲ್ಲಿ ಈವರೆಗೂ ಅನುಷ್ಠಾನಗೊಂಡಿರುವ ಯೋಜನೆಗಳಿಂದ ಶೇ 19.5ರಷ್ಟು ಇಂಧನ ಲಭ್ಯವಾಗುತ್ತಿದೆ. ಹಾಗೆಯೇ ನವೀಕೃತ ಇಂಧನ ಉತ್ಪಾದನೆಯ ಪ್ರಮಾಣವು ಶೇ 44ರಷ್ಟಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.
‘ಸೌರ ಫಲಕಗಳ ಅಳವಡಿಕೆಯ ಬೃಹತ್ ಯೋಜನೆಗೆ ತಗಲುವ ವೆಚ್ಚವು ಶೇ 26ರಷ್ಟು ಕಡಿಮೆಯಾಗಿದೆ. ಇದು ಪ್ರತಿ ತ್ರೈಮಾಸಿಕಕ್ಕೂ ಶೇ 2ರಷ್ಟು ಕಡಿತಗೊಳ್ಳುತ್ತಾ ಸಾಗಿದೆ. ಆದರೆ ಈ ಹಂತದಲ್ಲಿ ಘಟಕ ಸ್ಥಾಪನೆಗೆ ಅಗತ್ಯವಿರುವ ಉಪಕರಣಗಳ ಪೂರೈಕೆ ಹಾಗೂ ಗ್ರಿಡ್‌ಗಳ ನಡುವೆ ಸಂಪರ್ಕ ಸಾಧಿಸುವುದೇ ದೊಡ್ಡ ಸವಾಲಾಗಿದೆ. ಈ ಸವಾಲುಗಳನ್ನು ಮೆಟ್ಟಿನಿಂತಲ್ಲಿ 2030ರ ಹೊತ್ತಿಗೆ 280 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ’ ಎಂದು ಮೆರ್‌ಕಾಮ್ ಕ್ಯಾಪಿಟಲ್ ಸಮೂಹದ ಸಿಇಒ ರಾಜ್ ಪ್ರಭು ತಿಳಿಸಿದ್ದಾರೆ.