ವಯನಾಡು: ಭೂಕುಸಿತ ಸಂಭವಿಸಿದ ವಯನಾಡಿನ ಗ್ರಾಮಗಳಲ್ಲಿ ಭಾರತೀಯ ಸೇನೆ ಎಡಬಿಡದೆ ಕಾರ್ಯಾಚರಣೆ ನಡೆಸುತ್ತಿದೆ. ಮನೆ, ಸೇತುವೆ ಎಲ್ಲವೂ ಸಂಪೂರ್ಣವಾಗಿ ನಾಶವಾಗಿ ಕೆಸರು ಉಳಿದ ಜಾಗದಲ್ಲಿ ಹೊಸ ಭರವಸೆ ಮೂಡಿಸಲು ರಕ್ಷಣಾ ತಂಡ ಜನರ ನೆರವಿಗೆ ನಿಂತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಒಂದೇ ದಿನದಲ್ಲಿ 190 ಅಡಿ ಉದ್ದದ ಬೈಲಿ ಸೇತುವೆ ನಿರ್ಮಿಸಿದ್ದಾರೆ. ಇರುವಂಜಿಪುಳ ನದಿಗೆ ಅಡ್ಡಲಾಗಿ ನಿರ್ಮಿಸಿದ ಈ ಸೇತುವೆ, ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಭಾರತೀಯ ಸೇನೆಯ ದಕ್ಷಿಣ ಕಮಾಂಡ್, ‘ಪ್ರತಿಕೂಲ ಹವಾಮಾನ, ನೀರಿನ ಮಟ್ಟ ಹೆಚ್ಚಳ, ಕಲ್ಲುಬಂಡೆಗಳ ರಾಶಿ, ಜಾಗದ ಕೊರತೆ ಇವೆಲ್ಲವೂ ರಕ್ಷಣಾ ಕಾರ್ಯಕ್ಕೆ ಅಡ್ಡಿ ಎಂದು ಕಾಣಿಸುತ್ತಿತ್ತು. ಆದರೆ ನಮ್ಮ ಸೇನೆಗಲ್ಲ. ಮದ್ರಾಸ್ ಎಂಜಿನಿಯರ್ಸ್ ತಂಡ ದಾಖಲೆಯ ಸಮಯದಲ್ಲಿ 190 ಅಡಿ ಬೈಲಿ ಸೇತುವೆ ನಿರ್ಮಿಸಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದೆ.
ವರದಿಗಳ ಪ್ರಕಾರ, ಸೇತುವೆ ನಿರ್ಮಾಣ ಕಾರ್ಯ ಜುಲೈ 31ರ ರಾತ್ರಿ 9.30ಕ್ಕೆ ಆರಂಭವಾಗಿ ಆಗಸ್ಟ್ 1ರ ಸಂಜೆ 5.30ಕ್ಕೆ ಮುಕ್ತಾಯವಾಗಿದೆ.
24 ಟನ್‌ಗಳಷ್ಟು ಭಾರವನ್ನು ಹೊರುವ ಸಾಮರ್ಥ್ಯ ಈ ಸೇತುವೆಗಿದೆ. ಮೇಜರ್ ಜನರಲ್ ವಿ.ಟಿ. ಮಾಥ್ಯು ಸೇರಿ ಇತರ ಸೇನಾ ಅಧಿಕಾರಿಗಳು ಸೇತುವೆ ಮೇಲೆ ವಾಹನ ಚಲಾಯಿಸಿ ಸಂಚಾರಕ್ಕೆ ಮುಕ್ತಗೊಳಿಸಿದರು.